ಸಾರಾಂಶ
ದೇಶದ ಮೊದಲ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇ ಅತ್ಯಾಧುನಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದು ವಿಶ್ವದ ಅತಿ ಉದ್ದದ ಮತ್ತು ಗರಿಷ್ಠ ಸಾಮರ್ಥ್ಯದ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿರಲಿದೆ
ನವದೆಹಲಿ: ದೇಶದ ಮೊದಲ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇ ಅತ್ಯಾಧುನಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದು ವಿಶ್ವದ ಅತಿ ಉದ್ದದ ಮತ್ತು ಗರಿಷ್ಠ ಸಾಮರ್ಥ್ಯದ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿರಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ರೈಲನ್ನು ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (ಆರ್‌ಡಿಎಸ್‌ಒ) ಸಿದ್ಧಪಡಿಸಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ)ಯಿಂದ ಅಗತ್ಯ ಸುರಕ್ಷತಾ ಅನುಮೋದನೆಗಳು ಜಾರಿಯಲ್ಲಿವೆ’ ಎಂದು ಅವರು ಮಾಹಿತಿ ನೀಡಿದರು.
40% ದೇಶದ ರೈತರು ಡಿಜಿ ಪಾವತಿ ಕಡೆಗೆ: ಸಮೀಕ್ಷೆ
ನವದೆಹಲಿ: ದೇಶದಲ್ಲಿನ ರೈತರು ಸಾಂಪ್ರದಾಯಿಕ ನಗದು ವ್ಯವಹಾರದಿಂದ ಡಿಜಿಟಲ್ ಪಾವತಿ ಕಡೆಗೆ ಮುಖ ಮಾಡಿದ್ದು, ಶೇ.40ರಷ್ಟು ರೈತರು ಯುಪಿಐ ರೀತಿ ಡಿಜಿಟಲ್ ಪಾವತಿ ಕಡೆಗೆ ಮುಖ ಮಾಡಿದ್ದಾರೆ ಎಂದು ಸಮೀಕ್ಷೆಯ ವರದಿಯೊಂದು ಹೇಳಿದೆ.ಮೆಕ್ ಕೆನ್ಸಿ ಎಂಬ ಸಮೀಕ್ಷಾ ಸಂಸ್ಥೆಯು ಜಾಗತಿಕವಾಗಿ 4400 ರೈತರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಭಾರತದಲ್ಲಿ 1031 ಜನರನ್ನು ಸಂದರ್ಶಿಸಿದ್ದಾರೆ. 2022ರಲ್ಲಿ ಶೇ.11ರಷ್ಟಿದ್ದ ಡಿಜಿಟಲ್ ಪಾವತಿ ಪ್ರಮಾಣವು 2024ರಲ್ಲಿ ಶೇ.43ಕ್ಕೆ ಹೆಚ್ಚಳವಾಗಿದೆ. ಸ್ಮಾರ್ಟ್‌ಫೋನ್ ಲಭ್ಯತೆ, ಯುಪಿಐ ಇದಕ್ಕೆ ಪ್ರಮುಖ ಅಂಶವಾಗಿದೆ ಎಂದು ವರದಿ ಹೇಳಿದೆ.
ಮುಂಬೈನಲ್ಲಿ 200 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ: ನಾಲ್ವರ ಬಂಧನ
ಮುಂಬೈ: ನವಿ ಮುಂಬೈಯಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಡ್ರಗ್ಸ್ ಜಾಲವನ್ನು ಭೇದಿಸಿದ್ದು, ನಾಲ್ವರನ್ನು ವಶಕ್ಕೆ ಪಡೆದಿದೆ. ಸುಮಾರು 200 ಕೋಟಿ ರು. ಮೌಲ್ಯದ ವಿವಿಧ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ವಿದೇಶದಿಂದ ದಂಧೆಯನ್ನು ನಿಯಂತ್ರಿಸಲಾಗುತ್ತಿದ್ದು, ಅಮೆರಿಕದಿಂದ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. 200 ಕೋಟಿ ರು. ಮೌಲ್ಯದ 11.54 ಕೆ.ಜಿ. ಕೊಕೇನ್, ಹೈಡ್ರೋಪೋನಿಕ್ ವೀಡ್ ಮತ್ತು 5.5 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪ್ರತ್ಯೇಕ ಡೊಮೈನ್
ಮುಂಬೈ: ಹೆಚ್ಚುತ್ತಿರುವ ಸೈಬರ್ ಹಣಕಾಸು ವಂಚನೆಗಳಿಗೆ ಕಡಿವಾಣ ಹಾಕಲು ಭಾರತೀಯ ಬ್ಯಾಂಕುಗಳು ಶೀಘ್ರದಲ್ಲೇ ಪ್ರತ್ಯೇಕ ಡೊಮೈನ್ ನೇಮ್, ಬ್ಯಾಂಕ್.ಇನ್ (bank.in) ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಫಿನ್.ಇನ್ (fin.in)ಹೊಂದಲಿವೆ ಎಂದು ಆರ್‌ಬಿಐ ಹೇಳಿದೆ.ಬ್ಯಾಂಕ್. ಇನ್ ಡೊಮೈನ್ ನೇಮ್‌ನ ನೋಂದಣಿ ಕಾರ್ಯ 2025ರ ಏಪ್ರಿಲ್‌ನಲ್ಲಿ ಆರಂಭವಾಗಲಿದೆ. ಆ ಬಳಿಕ ಫಿನ್.ಇನ್ ಡೊಮೈನ್ ನೇಮ್‌ಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು. ಡಿಜಿಟಲ್ ಪೇಮೆಂಟ್ ವ್ಯವಸ್ಥೆ ವಂಚನೆ ಪ್ರಕರಣಗಳ ಕುರಿತು ವ್ಯಕ್ತವಾಗುತ್ತಿರುವ ಕಳವಳಗಳ ಹಿನ್ನೆಲೆಯಲ್ಲಿ ಹಣಕಾಸು ಕ್ಷೇತ್ರದ ಮೇಲಿನ ವಿಶ್ವಾಸಾರ್ಹತೆ ಹೆಚ್ಚಿಸಲು ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ.
ಕಾಶ್ಮೀರ ಗಡಿಗೆ ನುಗ್ಗಲೆತ್ನಿಸಿದ 7 ಪಾಕಿಗಳ ಹತ್ಯೆ; ಈ ಪೈಕಿ ಮೂವರು ಸೇನಾ ಸಿಬ್ಬಂದಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) 7 ಜನರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಪೈಕಿ ಮೂವರು ಪಾಕ್ ಸೇನೆಯ ಸಿಬ್ಬಂದಿ ಎಂದು ತಿಳಿದುಬಂದಿದೆ.ಫೆ.4-5ರ ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ನುಸುಳುಕೋರರು ಹೊಂಚು ದಾಳಿಗೆ ಯೋಚಿಸಿದ್ದರು. ಈ ದಾಳಿಯನ್ನು ಭಾರತೀಯ ಸೇನೆಯು ವಿಫಲಗೊಳಿಸಿದೆ. ಮೃತ 7 ನುಸುಳುಕೋರರಲ್ಲಿ ಪಾಕಿಸ್ತಾನ ಸೇನೆಯ 2-3 ಸಿಬ್ಬಂದಿ ಸಾವನ್ನಪ್ಪಿದ್ದರೆ, ಉಳಿದವರು ಅಲ್- ಬದರ್ ಉಗ್ರ ಸಂಘಟನೆಯ ಸದಸ್ಯರು ಎಂದು ಶಂಕಿಸಲಾಗಿದೆ.
ಈ ವಾರದ ಆರಂಭದಲ್ಲಷ್ಟೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಭಾರತದೊಂದಿಗೆ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಸಿದ್ಧ ಎಂದಿದ್ದರು. ಈ ನಡುವೆ ಬೆಳವಣಿಗೆ ನಡೆದಿದೆ.