ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ತಾಂತ್ರಿಕ ದೋಷ: ಲಕ್ಷಾಂತರ ಪ್ರಯಾಣಿಕರಿಗೆ ಗೋಳು

| Published : Oct 06 2024, 01:17 AM IST / Updated: Oct 06 2024, 08:55 AM IST

ಸಾರಾಂಶ

ಶನಿವಾರ ಇಂಡಿಗೋದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಟಿಕೆಟ್ ಬುಕಿಂಗ್ ಮತ್ತು ಚೆಕ್-ಇನ್‌ನಲ್ಲಿ ವಿಳಂಬ ಉಂಟಾಗಿ ಸಾವಿರಾರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ದೇಶದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಮುಂಬೈ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಶನಿವಾರ ಕಾಣಿಸಿಕೊಂಡ ತಾಂತ್ರಿಕ ದೋಷದ ಪರಿಣಾಮ ಸಾವಿರಾರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿ ಲಕ್ಷಾಂತರ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು.

ಶನಿವಾರ ಬೆಳಗ್ಗೆ ಉಂಟಾದ ಸಮಸ್ಯೆಯಿಂದಾಗಿ ಟಿಕೆಟ್‌ ಬುಕಿಂಗ್‌, ಚೆಕ್‌ಇನ್‌ನಲ್ಲಿ ಭಾರೀ ವಿಳಂಬ ಉಂಟಾಯಿತು. ಹೀಗಾಗಿ ದೇಶದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಬಸ್‌, ರೈಲ್ವೆ ನಿಲ್ದಾಣಗಳಂತೆ ಪ್ರಯಾಣಿಕರ ಉದ್ದನೆಯ ಸರದಿ ಕಂಡುಬಂತು, ಪರಿಣಾಮ ವಿಮಾನಗಳ ಸಂಚಾರದಲ್ಲೂ ವಿಳಂಬ ಉಂಟಾಯಿತು.

ದೇಶೀಯ ವಿಮಾನ ಮಾರುಕಟ್ಟೆಯಲ್ಲಿ ಶೇ.62ರಷ್ಟು ಪಾಲು ಹೊಂದಿರುವ ಇಂಡಿಗೋ ಸಂಸ್ಥೆಯ ಬಳಿ 379 ವಿಮಾನಗಳಿದ್ದು, ಪ್ರತಿನಿತ್ಯ 122 ಸ್ಥಳಗಳಿಗೆ 2000ಕ್ಕೂ ಹೆಚ್ಚು ಸಂಚಾರ ನಡೆಸುತ್ತಿದೆ.

ಈ ನಡುವೆ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪ್ರಯಾಣಿಕರು ತಮ್ಮ ಅಸಮಾಧಾನ ಹೊರಹಾಕಿದ್ದು, ‘ವಯಸ್ಸಾದವರು ಕಷ್ಟಪಡುತ್ತಿರುವುದನ್ನು ನೋಡಲಾಗುತ್ತಿಲ್ಲ. ಇನ್ನೂ ಹೆಚ್ಚಿನ ಕೌಂಟರ್‌ಗಳನ್ನು ತೆರೆಯುವ ಅವಶ್ಯಕತೆ ಇದೆ. ಹೊಸ ವಿಮಾನಗಳ ಮೇಲೆ ಹೂಡಿಕೆ ಮಾಡುವ ಬದಲು ಉತ್ತಮ ಸೇವೆ ಒದಗಿಸುವತ್ತ ಗಮನ ಹರಿಸುಬೇಕು’ ಎಂದು ಸಲಹೆ ನೀಡಿದ್ದಾರೆ.