ಸಾರಾಂಶ
ಐಜ್ವಾಲ್: ಮಿಜೋರಂ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 40 ಸ್ಥಾನಗಳ ಪೈಕಿ 27 ಸೀಟು ಗೆದ್ದು ಝಡ್‌ಪಿಎಂ (ಝೋರಮ್ ಪೀಪಲ್ಸ್ ಮೂವ್‌ಮೆಂಟ್) ಪಕ್ಷ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಪಕ್ಷದ ನಾಯಕ ಲಾಲ್ಡು ಹೋಮಾ ರಾಜ್ಯದ ನೂತನ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ.ವಿಶೇಷವೆಂದರೆ, ಲಾಲ್ಡು ಹೋಮಾ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಪ್ರಧಾನಿ ಇಂದಿರಾ ಗಾಂಧಿ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಇಂದಿರಾ ಅಂಗರಕ್ಷಕರಾಗಿದ್ದಾಗಲೇ ಐಪಿಎಸ್ ಹುದ್ದೆಗೆ ಲಾಲ್ಡು ಹೋಮಾ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ಬಳಿಕ ಅವರನ್ನು ಮಿಜೋ ಉಗ್ರರ ಜೊತೆ ಶಾಂತಿ ಒಪ್ಪಂದ ನಡೆಸಲು ಇಂದಿರಾಗಾಂಧಿ ನೇಮಕ ಮಾಡಿ ಮಿಜೋರಂಗೆ ಕಳುಹಿಸಿದ್ದರು. ಈ ವೇಳೆ ಅವರು ಮಿಜೋ ಉಗ್ರ ಸಂಘಟನೆಯ ನಾಯಕರಾಗಿದ್ದ ಝೋರಮ್‌ತಂಗಾ (ಮಣಿಪುರದ ನಿರ್ಗಮಿತ ಮುಖ್ಯಮಂತ್ರಿ) ಅವರ ಸಂಘಟನೆ ಜೊತೆ ಮಾತುಕತೆ ನಡೆಸಿ ಮಿಜೋರಂ ರಾಜ್ಯ ರಚನೆಗೆ ಕಾರಣಕರ್ತರಾಗಿದ್ದರು. 1987ರಲ್ಲಿ ಶಾಂತಿ ಒಪ್ಪಂದಕ್ಕೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಅಂಕಿತ ಹಾಕಿದ್ದರು.1984ರಲ್ಲಿ ಮಿಜೋರಂನಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಲಾಲ್ಡು ಹೋಮಾ ನಂತರದ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವದ ಅವಕೃಪೆಗೆ ಒಳಗಾದರು. ಪಕ್ಷದ ವಿಪ್ ಉಲ್ಲಂಘಿಸಿದ ಕಾರಣ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಲಾಗಿತ್ತು. ತನ್ಮೂಲಕ ಅನರ್ಹಗೊಂಡ ಮೊದಲ ಸಂಸದ ಎಂಬ ಕುಖ್ಯಾತಿಗೂ ಅವರು ಪಾತ್ರರಾಗಿದ್ದರು.ಇದಾದ ಬಳಿಕ ಝೋರಂ ಪೀಪಲ್ಸ್ ಮೂವ್‌ಮೆಂಟ್ ಪಕ್ಷದ ಜೊತೆ ಕೆಲಸ ಮಾಡುತ್ತಾ, ಪಕ್ಷದ ನಾಯಕರಾಗಿ ದುಡಿದರು. ಇದೀಗ ಇವರ ಪಕ್ಷ ಬಹುಮತ ಪಡೆದುಕೊಂಡಿದ್ದು, ಮುಖ್ಯಮಂತ್ರಿಯ ಹುದ್ದೆಗೆ ಏರಲಿದ್ದಾರೆ.