ಭಾರತದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್‌ಗೆ 32000 ಕೋಟಿ ರು. ತೆರಿಗೆ ನೋಟಿಸ್‌

| Published : Aug 01 2024, 12:17 AM IST / Updated: Aug 01 2024, 10:11 AM IST

ಸಾರಾಂಶ

ಭಾರತದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ, ಬೆಂಗಳೂರು ಮೂಲದ ಇನ್ಫೋಸಿಸ್‌ಗೆ ಕರ್ನಾಟಕದ ಜಿಎಸ್ಟಿ ಅಧಿಕಾರಿಗಳು ಜಿಎಸ್ಟಿ ಗುಪ್ತಚರ ಪ್ರದ ನಿರ್ದೇಶನಾಲಯ ಅಧಿಕಾರಿಗಳು 32 ಸಾವಿರ ಕೋಟಿ ರು. ಮೊತ್ತದ ಶೋಕಾಸ್‌ ಪೂರ್ವ ನೋಟಿಸ್‌ ಜಾರಿ ಮಾಡಿದ್ದಾರೆ.

ನವದೆಹಲಿ: ಭಾರತದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ, ಬೆಂಗಳೂರು ಮೂಲದ ಇನ್ಫೋಸಿಸ್‌ಗೆ ಕರ್ನಾಟಕದ ಜಿಎಸ್ಟಿ ಅಧಿಕಾರಿಗಳು ಜಿಎಸ್ಟಿ ಗುಪ್ತಚರ ಪ್ರದ ನಿರ್ದೇಶನಾಲಯ ಅಧಿಕಾರಿಗಳು 32 ಸಾವಿರ ಕೋಟಿ ರು. ಮೊತ್ತದ ಶೋಕಾಸ್‌ ಪೂರ್ವ ನೋಟಿಸ್‌ ಜಾರಿ ಮಾಡಿದ್ದಾರೆ.ವಿಶೇಷವೆಂದರೆ ಜಿಎಸ್ಟಿಯ ವೆಬ್‌ಸೈಟ್‌ ಅಭಿವೃದ್ಧಿಪಡಿಸಿರುವುದೇ ಇನ್ಫೋಸಿಸ್‌. 

ಜೊತೆಗೆ ತೆರಿಗೆ ವಂಚನೆ ಆರೋಪದಡಿ ಕಟ್ಟಲು ಸೂಚಿಸಲಾಗಿರುವ 32,000 ಕೋಟಿ ರು.ಮೊತ್ತ ಕಂಪನಿಯ ಒಂದಿಡೀ ವರ್ಷದ ಲಾಭಕ್ಕೆ ಸಮ. ಈ ನೋಟಿಸ್‌ ಕುರಿತು ಇನ್ಫೋಸಿಸ್‌ ಷೇರುಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಸೆಬಿಗೆ ಮಾಹಿತಿ ನೀಡಿದೆ. ಅಲ್ಲದೆ ನೋಟಿಸ್‌ಗೆ ತಾನು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿಸಿದೆ. ಜೊತೆಗೆ ಇಂಥ ವೆಚ್ಚಗಳಿಗೆ ಜಿಎಸ್ಟಿ ಅನ್ವಯವಾಗದು ಎಂದು ತಾನು ನಂಬಿರುವುದಾಗಿ ಕಂಪನಿ ಹೇಳಿದೆ. ಜೊತೆಗೆ ಇದಕ್ಕೆ ಪೂರಕವಾಗಿ, ಭಾರತೀಯ ಕಂಪನಿಯೊಂದು ವಿದೇಶಗಳ ಶಾಖೆ ಮೂಲಕ ನೀಡಿದ ಸೇವೆ ಜಿಎಸ್ಟಿ ವ್ಯಾಪ್ತಿಗೆ ಬರದು ಎಂದು ಇತ್ತೀಚೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಹೊರಡಿಸಿದ ಸುತ್ತೋಲೆಯನ್ನೂ ಇನ್ಫೋಸಿಸ್‌ ಉಲ್ಲೇಖಿಸಿದೆ.

ಏನಿದು ಪ್ರಕರಣ?:ಇನ್ಪೋಸಿಸ್‌ ಸಂಸ್ಥೆ ತನ್ನ ವಿದೇಶಿ ಗ್ರಾಹಕರ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ವಿದೇಶಗಳಲ್ಲೇ ತನ್ನ ಕೆಲವು ಶಾಖೆಗಳನ್ನು ತೆರೆದಿದೆ. 2017-18ರಿಂದ 2021-22ರ ಅವಧಿಯಲ್ಲಿ ಇನ್ಪೋಸಿಸ್‌ ಈ ವಿದೇಶಿ ಶಾಖೆಗಳ ಮೂಲಕ ನೀಡಿದ ಸೇವೆಗೆ ಐಜಿಎಸ್‌ಟಿ (ಇಂಟಿಗ್ರೇಟೆಡ್‌ ಗೂಡ್ಸ್‌ ಆ್ಯಂಡ್‌ ಸರ್ವೀಸ್‌ ಟ್ಯಾಕ್ಸ್‌) ಕಟ್ಟಬೇಕಿತ್ತು. ಆದರೆ ಈ ತೆರಿಗೆಯನ್ನು ಅದು ಕಟ್ಟಿಲ್ಲ. ಇದು ತೆರಿಗೆ ವಂಚನೆ ಎಂದು ಪರಿಗಣಿತವಾಗುತ್ತದೆ. ಹೀಗಾಗಿ ಈ ಅವಧಿಗೆ ಪಾವತಿಸದೇ ಉಳಿದ 32403 ಕೋಟಿ ರು. ಜಿಎಸ್ಟಿ ಬಾಕಿ ಪಾವತಿಸುವಂತೆ ಇನ್ಪೋಸಿಸ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ತೆರಿಗೆ ಸಂಸ್ಥೆ ವಾದ ಏನು?:ಐಜಿಎಸ್ಟಿ ನಿಯಮಗಳ ಅನ್ವಯ, ಇನ್ಫೋಸಿಸ್‌ ತನ್ನ ವಿದೇಶಿ ಶಾಖೆಗಳ ಮೂಲಕ ನಿರ್ವಹಿಸಿದ ಸೇವೆಯನ್ನು ಮೂಲ ಕಂಪನಿಯ ಮೂಲಕ ನೀಡಿದ ಸೇವೆ ಎಂದೇ ಪರಿಗಣಿಸಲಾಗುತ್ತದೆ. ಆರ್‌ಸಿಎಂ (ರಿವರ್ಸ್‌ ಚಾರ್ಜ್‌ ಮೆಕಾನಿಸಂ) ಅನ್ವಯ, ಸೇವೆ ನೀಡಿದವರ ಬದಲಾಗಿ, ಸೇವೆ ಸ್ವೀಕರಿಸಿದವರು ತೆರಿಗೆ ಪಾವತಿಸಬೇಕಿದೆ. ಜೊತೆಗೆ ಇನ್ಫೋಸಿಸ್‌ ತನ್ನ ವಿದೇಶಿ ಶಾಖೆಗಳ ವೆಚ್ಚವನ್ನು ರಫ್ತು ಇನ್ವಾಯ್ಸ್‌ ಮೂಲಕ ರೀಫಂಡ್‌ಗೆ ಬಳಸಿಕೊಂಡಿದೆ. ಹೀಗಾಗಿ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಕಂಪನಿಗೆ 32403 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.