ಕೇಂದ್ರ ಬಜೆಟ್ 2024 - ಹೆದ್ದಾರಿ ನಿರ್ಮಾಣದಂಥ ಮೂಲಸೌಕರ್ಯ ವಲಯಕ್ಕೆ 11.11 ಲಕ್ಷ ಕೋಟಿ ರು.

| Published : Jul 24 2024, 12:18 AM IST / Updated: Jul 24 2024, 07:53 AM IST

ಸಾರಾಂಶ

ಕಳೆದ 5 ವರ್ಷ ಹೆದ್ದಾರಿ ನಿರ್ಮಾಣದಂಥ ಮೂಲಸೌಕರ್ಯ ಯೋಜನೆಗಳ ಮೇಲೆ ಭಾರಿ ಹಣ ವ್ಯಯಿಸಿದ್ದ ಮೋದಿ ಸರ್ಕಾರ ಮುಂದಿನ 5 ವರ್ಷದಲ್ಲಿ ಅದಕ್ಕಿಂತ ಹೆಚ್ಚು ವೆಚ್ಚ ಮಾಡಲು ನಿರ್ಧರಿಸಿದೆ

 ನವದೆಹಲಿ:  ಕಳೆದ 5 ವರ್ಷ ಹೆದ್ದಾರಿ ನಿರ್ಮಾಣದಂಥ ಮೂಲಸೌಕರ್ಯ ಯೋಜನೆಗಳ ಮೇಲೆ ಭಾರಿ ಹಣ ವ್ಯಯಿಸಿದ್ದ ಮೋದಿ ಸರ್ಕಾರ ಮುಂದಿನ 5 ವರ್ಷದಲ್ಲಿ ಅದಕ್ಕಿಂತ ಹೆಚ್ಚು ವೆಚ್ಚ ಮಾಡಲು ನಿರ್ಧರಿಸಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಮೂಲಸೌಕರ್ಯ ಅಗತ್ಯ ವಲಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚು ಒತ್ತು ನೀಡಿದೆ.ಹಣಕಾಸು ಸಚಿವರು 2024ರ  ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 11.11 ಲಕ್ಷ ಕೋಟಿ ರು. ಖರ್ಚು ಮಾಡುವುದಾಗಿ ಪ್ರಕಟಿಸಿದ್ದಾರೆ. ಇದು ಜಿಡಿಪಿಯ ಶೇ.3.4ರಷ್ಟಾಗುತ್ತದೆ. ಇದು ಕಳೆದ ವರ್ಷಗಳ ಪರಿಷ್ಕೃತ ಅಂದಾಜು 9.5 ಲಕ್ಷ ಕೋಟಿ ರು.ಗಿಂತ ಅಧಿಕವಾಗಿದೆ.

ಹಿಂದಿನ ವರ್ಷದಲ್ಲಿ ಶೇ.3.2ರಷ್ಟು ಜಿಡಿಪಿ ಮೊತ್ತವನ್ನು ಮೂಲಸೌಕರ್ಯ ಬಂಡವಾಳ ವೆಚ್ಚವಾಗಿ ತೆಗೆದಿರಿಸಲಾಗಿತ್ತು. ಆದರೆ ಈ ಸಲ ಶೇ.3.4ರಷ್ಟು ತೆಗೆದಿರಿಸಲಾಗಿದ್ದು, 5 ವರ್ಷಗಳ ಹಿಂದೆ ಖರ್ಚು ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು.

ರಾಜ್ಯಗಳಿಗೆ 1.5 ಲಕ್ಷ ಕೋಟಿ ರು. ಸಾಲ

ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ಕೋಟಿ ರು. ದೀರ್ಘಾವಧಿ ಬಡ್ಡಿರಹಿತ ಸಾಲ ನೀಡಿಕೆಯನ್ನು ಮುಂದುವರಿಸಲಿದೆ. ಆದರೆ ಇದಕ್ಕೆ ರಾಜ್ಯಗಳು ಕೇಂದ್ರ ವಿಧಿಸಿದ ಕೆಲವು ಷರತ್ತುಗಳಿಗೆ ಬದ್ಧವಾಗಿರಬೇಕು. ಇದೇ ವೇಳೆ ಖಾಸಗಿ ಕಂಪನಿಗಳಿಗೂ ಮೂಲಸೌಕರ್ಯ ವಲಯದಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗುವುದು.

ಗ್ರಾಮ ಸಡಕ್‌ ಹಂತ -4 ಜಾರಿ

25 ಸಾವಿರ ಹಳ್ಳಿಗಳಿಗೆ ಉತ್ತಮ ಸರ್ವಋತು ರಸ್ತೆ ಸಂಪರ್ಕ ಕಲ್ಪಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಹಂತ-4ನ್ನು ಜಾರಿಗೊಳಿಸಲಾಗುವುದು. ಇದರ ಜತೆಗೆ ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂನಂತ ಪ್ರಕೃತಿ ವಿಕೋಪ ಪೀಡಿತ ರಾಜ್ಯಗಳಲ್ಲಿ ರಸ್ತೆ, ಸೇತುವೆಯಂಥ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರಿಡಾರ್‌ಗಳು

ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಶಿ ಮಾದರಿಯಲ್ಲಿ ಕಾರಿಡಾರ್‌ ನಿರ್ಮಾಣ ಸೇರಿ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಶ್ರಾದ್ಧ ಕರ್ಮಾದಿಗಳಿಗೆ ಹೆಸರುವಾಸಿಯಾದ ಬಿಹಾರದ ಗಯಾ ವಿಷ್ಣುಪಾದ ದೇವಾಲಯ ಸುತ್ತಮುತ್ತ ವಿಷ್ಣುಪಾದ ದೇವಾಲಯ ಕಾರಿಡಾರ್ ನಿರ್ಮಿಸಲಾಗುವುದು.

ಇನ್ನು ಬಿಹಾರದ ರಾಜಗೀರ್‌ ಹಿಂದೂ, ಬೌದ್ಧ ಹಾಗೂ ಜೈನ ಧರ್ಮೀಯರ ಯಾತ್ರಾ ಸ್ಥಳ. ಇಲ್ಲಿ 20ನೇ ತೀರ್ಥಂಕರ ಮುನಿಸುವ್ರತರ ಬಸದಿಯಿದೆ. ಸಪ್ತಋಷಿ ಬ್ರಹ್ಮಕುಂಡದ ಪವಿತ್ರ ನೀರಿದೆ. ಹೀಗಾಗಿ ರಾಜಗೀರ್‌ ಸಮಗ್ರ ಅಭವೃದ್ಧಿಗೆ ಕೇಂದ್ರ ಘೋಷಣೆ ಮಾಡಿದೆ.

ನಳಂದ ವಿವಿ ಇರುವ ನಳಂದದ ಸಮಗ್ರ ಅಭಿವೃದ್ಧಿ ಹಾಗೂ ಒಡಿಶಾದ ವಿವಿಧ ಕ್ಷೇಗ್ರಗಳ ಅಭಿವೃದ್ಧಿಗೆ ಕ್ರಮ ಘೋಷಿಸಲಾಗಿದೆ.