ಸ್ವದೇಶಿ ನಿರ್ಮಿತ, ಪರಮಾಣು ಇಂಧನ ಚಾಲಿತ ‘ಐಎನ್‌ಎಸ್‌ ಅರಿಘಾಟ್: ಭಾರತೀಯ ನೌಕಾಪಡೆಗೆ ಹೊಸ ಸೇರ್ಪಡೆ

| Published : Aug 30 2024, 01:04 AM IST / Updated: Aug 30 2024, 05:16 AM IST

ಸಾರಾಂಶ

ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ, ಪರಮಾಣು ಇಂಧನ ಚಾಲಿತ ‘ಐಎನ್‌ಎಸ್‌ ಅರಿಘಾಟ್’ ಜಲಾಂತರ್ಗಾಮಿಯನ್ನು ಸೇರ್ಪಡೆಗೊಳಿಸಿಕೊಂಡಿದೆ. ಈ ಸಬ್‌ಮರೀನ್‌ ಐಎನ್‌ಎಸ್‌ ಅರಿಹಂತ್‌ ಶ್ರೇಣಿಯಲ್ಲೇ ಉನ್ನತ ದರ್ಜೆಯದ್ದಾಗಿದ್ದು, ಭಾರತದ ಎರಡನೇ ವಿಶ್ವಾಸಾರ್ಹ ದಾಳಿ ನೌಕೆಯಾಗಿದೆ.

ವಿಶಾಖಪಟ್ಟಣ: ಸ್ವದೇಶಿ ನಿರ್ಮಿತ, ಪರಮಾಣು ಇಂಧನ ಚಾಲಿತ ‘ಐಎನ್‌ಎಸ್‌ ಅರಿಘಾಟ್’ ಜಲಾಂತರ್ಗಾಮಿಯನ್ನು ಗುರುವಾರ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಈ ಸಬ್‌ಮರೀನ್‌ ಅನ್ನು ನೌಕಾಪಡೆಗೆ ಬರಮಾಡಿಕೊಂಡರು. ಇದು ಭಾರತದ ನೌಕಾಪಡೆಯ 2ನೇ ಪರಮಾಣು ಇಂಧನ ಚಾಲಿತ ಜಲಾಂತರ್ಗಾಮಿಯಾಗಿದೆ.

ಐಎನ್‌ಎಸ್‌ ಅರಿಘಾಟ್‌, ಹಾಲಿ ನೌಕಾಪಡೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತಿರುವ ಐಎನ್‌ಎಸ್‌ ಅರಿಹಂತ್‌ ಶ್ರೇಣಿಯಲ್ಲೇ ಉನ್ನತ ದರ್ಜೆಯದ್ದಾಗಿದೆ. ಈ ಸಬ್‌ಮರೀನ್‌ ಅನ್ನು ಇಲ್ಲಿನ ಶಿಪ್‌ ಬಿಲ್ಡಿಂಗ್‌ ಸೆಂಟರ್‌ನಲ್ಲಿ 2017ರಿಂದಲೂ ನಿರ್ಮಿಸಿ, ಪರೀಕ್ಷೆ ಒಳಪಡಿಸಲಾಗುತ್ತಿತ್ತು.

ಈ ಸಬ್‌ಮರೀನ್‌ ಸೇರ್ಪಡೆಯೊಂದಿಗೆ ಭಾರತ ನೌಕಾಪಡೆ, ತನ್ನ ಎರಡನೇ ವಿಶ್ವಾಸಾರ್ಹ ದಾಳಿ ನೌಕೆಯನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡಂತೆ ಆಗಿದೆ. ಹಾಲಿ ನೌಕಾಪಡೆಯಲ್ಲಿ ಇರುವ ಐಎನ್‌ಎಸ್‌ ಅರಿಹಂತ್‌ ಕೂಡಾ ಎಸ್‌ಎಸ್‌ಬಿಎನ್‌ (ಶಿಪ್‌, ಸಬ್‌ಮರ್ಸಿಬಲ್‌, ಬ್ಯಾಲೆಸ್ಟಿಕ್‌, ನ್ಯೂಕ್ಲಿಯರ್‌) ಆಗಿದ್ದು, ಇದೀಗ ಅದಕ್ಕೆ ಐಎನ್‌ಎಸ್‌ ಅರಿಘಾಟ್‌ ಕೂಡಾ ಸೇರ್ಪಡೆಯಾಗಿದೆ.

ಸಾಮರ್ಥ್ಯ:

ಈ ಸಬ್‌ಮರೀನ್‌ ನೀರಿನ ಮೇಲೆ ಗಂಟೆಗೆ 22-28 ಕಿ.ಮೀ ವೇಗದಲ್ಲಿ, ನೀರಿನಾಳದಲ್ಲಿ 44 ಕಿ.ಮೀ ವೇಗದಲ್ಲಿ ಚಲಿಸಲಬಲ್ಲದಾಗಿದೆ.

ಸಬ್‌ಮರೀನ್‌ ಕ್ಷಿಪಣಿ ಉಡ್ಡಯನಕ್ಕೆ 4 ಉಡ್ಡಯನ ಟ್ಯೂಬ್‌ಗಳನ್ನು ಹೊಂದಿದೆ. ಇವು 3500 ಕಿ.ಮೀ ದೂರಸಾಗಬಲ್ಲ ಕೆ-4 ಕ್ಷಿಪಣಿ ಅತವಾ 750 ಕಿ.ಮೀ ದೂರ ಸಾಗಬಲ್ಲ 12 ಕೆ-15 ಕ್ಷಿಪಣಿಗಳನ್ನು ಕೊಂಡೊಯ್ಯಬಲ್ಲಾಗಿದೆ.

ಕೆ-15 ಕ್ಷಿಪಣಿಗಳಿಗೆ ಅಣ್ವಸ್ತ್ರ ಸಿಡಿತಲೆಗಳನ್ನು ಜೋಡಿಸಿ ಹಾರಿಸಬಹುದಾಗಿದೆ. ಅಲ್ಲದೆ ಇದಕ್ಕೆ ಟೋರ್ಪೆಡೋಗಳನ್ನು ಕೂಡಾ ಅಳವಡಿಸಬಹುದಾಗಿದೆ.