- ಹೋರ್ಮುಜ್‌ ಬಗ್ಗೆ ಇರಾನ್‌ ನಾಯಕತ್ವ ವಿಶೇಷ ಉಡುಗೊರೆ ಕಳಿಸಿದೆ-ಆದರೆ ಅದ್ಯಾವ ಉಡುಗೊರೆ ಎಂದು ನಿಮಗೆ ಹೇಳಲ್ಲ-ಅವರು ನಮ್ಮೊಂದಿಗೆ ಒಪ್ಪಂದಕ್ಕೆ ಉತ್ಸುಕರಾಗಿದ್ದಾರೆ-ನಾವು ಸರಿಯಾದ ಜನರೊಂದಿಗೆ ವ್ಯವಹರಿಸುತ್ತಿದ್ದೇವೆ

ಪಿಟಿಐ ವಾಷಿಂಗ್ಟನ್‌

ಮಧ್ಯಪ್ರಾಚ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಿನಕ್ಕೊಂದು ಹೇಳಿಕೆ ಕೊಡುವುದನ್ನು ಮುಂದುವರಿಸಿದ್ದು, ಇರಾನ್‌ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದದಿರಲು ಒಪ್ಪಿಕೊಂಡಿದೆ. ಜೊತೆಗೆ, ಹೋರ್ಮುಜ್‌ ಜಲಸಂಧಿಗೆ ಸಂಬಂಧಿಸಿದ ವಿಶೇಷ ಉಡುಗೊರೆಯನ್ನು ಕಳುಹಿಸಿದೆ ಎಂದು ಮಂಗಳವಾರ ಹೇಳಿದ್ದಾರೆ. ಆದರೆ ಅದ್ಯಾವ ಉಡುಗೊರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ.

ಓವಲ್‌ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇರಾನ್‌ ತಾನು ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದೆ. ಅದು ನಿನ್ನೆ ಅದ್ಭುತವಾದ ಕೆಲಸ ಮಾಡಿದೆ. ಅಲ್ಲಿನ ನಾಯಕತ್ವವು ಅಮೆರಿಕಕ್ಕೆ ಹೋರ್ಮುಜ್ ಜಲಸಂಧಿ ಮತ್ತು ತೈಲ ಹರಿವಿಗೆ ಸಂಬಂಧಿಸಿದ ಮಹತ್ವದ ಉಡುಗೊರೆಯನ್ನು ಕಳಿಸಿಕೊಟ್ಟಿದೆ. ಅದು ಅಪಾರ ಹಣದ ಮೌಲ್ಯವುಳ್ಳ ಬಹಳ ದೊಡ್ಡ ಉಡುಗೊರೆ. ಆದರೆ ಅದು ಏನು ಎಂದು ನಾನು ನಿಮಗೆ ಹೇಳುವುದಿಲ್ಲ, ಅದು ಅಣ್ವಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ತೈಲ ಹಾಗೂ ಅನಿಲಕ್ಕೆ ಸಂಬಂಧಿಸಿದ್ದು. ಅದು ಬಹಳ ಮಹತ್ವದ್ದು’ ಎಂದು ಮೆಚ್ಚುಗೆ ಸೂಚಿಸಿದರು.

ಇರಾನ್ ಒಪ್ಪಂದಕ್ಕೆ ಉತ್ಸುಕ:‘ಇರಾನ್ ಒಪ್ಪಂದ ಮಾಡಿಕೊಳ್ಳಲು ಉತ್ಸುಕವಾಗಿದೆ. ಅಮೆರಿಕ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್, ವಿದೇಶಾಂಗ ಸಚಿವ ಮಾರ್ಕೊ ರುಬಿಯೊ, ಮಧ್ಯಪ್ರಾಚ್ಯದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಮಾತುಕತೆಯ ನೇತೃತ್ವ ವಹಿಸುತ್ತಿದ್ದಾರೆ’ ಎಂದರು.ಇದೇ ವೇಳೆ, ‘ಪ್ರಸ್ತುತ ಇರಾನಿನ ನಾಯಕತ್ವವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ನಮಗೆ ನಿಜವಾಗಿಯೂ ಬೇಕಾಗಿದ್ದು ಇದೇ, ಆಡಳಿತ ಬದಲಾವಣೆ. ನಿಮಗೆ ಗೊತ್ತಾ? ಇದು ಆಡಳಿತದಲ್ಲಿನ ಬದಲಾವಣೆ. ಏಕೆಂದರೆ ಹೊಸ ನಾಯಕರು ಎಲ್ಲಾ ಸಮಸ್ಯೆಗಳಿಗೆ ಕಾರಣರಾದ ಹಳೆಯ ನಾಯಕರಿಗಿಂತ ಬಹಳ ಭಿನ್ನರಾಗಿದ್ದಾರೆ’ ಎಂದರು. ಈ ಮೂಲಕ ಆಡಳಿತ ಬದಲಾವಣೆಯೇ ನಮ್ಮ ಮುಖ್ಯ ಉದ್ದೇಶ, ಅದೀಗ ಸಾಕಾರವಾಗಿದೆ. ಹಾಗಾಗಿ ಯುದ್ಧ ನಿಲ್ಲಬಹುದು ಎಂಬ ಸುಳಿವು ನೀಡಿದರು. ಯುದ್ಧ ಗೆದ್ದಿದ್ದೇವೆ: ‘ನನಗೆ ಒಂದು ವಿಷಯ ಅರ್ಥವಾಯಿತು, ನಾವು ಸರಿಯಾದ ಜನರೊಂದಿಗೆ ವ್ಯವಹರಿಸುತ್ತಿದ್ದೇವೆ. ಇದು ಪರಮಾಣು ಶಸ್ತ್ರಾಸ್ತ್ರಗಳಿಗಲ್ಲ, ಬದಲಾಗಿ ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ ವಿಚಾರ. ನಾವು ಗೆದ್ದಿದ್ದೇವೆ. ಈ ಯುದ್ಧ ಗೆದ್ದಿದೆ. ಟೆಹ್ರಾನ್ ಮತ್ತು ಅವರ ದೇಶದ ಇತರ ಭಾಗಗಳ ಮೇಲೆ ನಮ್ಮ ವಿಮಾನಗಳು ಹಾರಾಡುತ್ತಿವೆ. ಅದಕ್ಕೆ ಅವರು ಏನು ಮಾಡಲೂ ಸಾಧ್ಯವಿಲ್ಲ’ ಎಂದರು.


==

ಟ್ರಂಪ್ ಅಳಿಯ ಬೇಡ, ವ್ಯಾನ್ಸ್ ಜತೆ ಮಾತುಕತೆಗೆ ಸಿದ್ಧ: ಇರಾನ್‌

ಟೆಹ್ರಾನ್‌: ಅಮೆರಿಕ- ಇರಾನ್‌ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿ ನಡುವೆಯೇ, ‘ನಾವು ಅಮೆರಿಕ ಅಧ್ಯಕ್ಷ ಟ್ರಂಪ್‌ ಅಥವಾ ಅವರ ಅಳಿಯ ಕುಶ್ನರ್‌ ಜತೆ ಮಾತನಾಡಲ್ಲ. ಅವರ ಬದಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಜತೆ ಮಾತುಕತೆ ಬಯಸುತ್ತೇವೆ‘ ಎಂದು ಇರಾನ್‌ ಹೇಳಿದೆ ಹಾಗೂ ಈ ಬಗ್ಗೆ ಅಮೆರಿಕಕ್ಕೆ ಸಂದೇಶ ಕಳಿಸಿದೆ ವರದಿಯಾಗಿದೆ.‘ಈಗ ನಡೆಯುತ್ತಿರುವ ಯುದ್ಧವನ್ನು ಶಾಂತಿ ಮಾತುಕತೆಗೆ ಸಿದ್ಧ. ಆದರೆ ಡೊನಾಲ್ಡ್‌ ಟ್ರಂಪ್‌ ಅಥವಾ ಸರ್ಕಾರದ ಇತರರೊಂದಿಗೆ ಮಾತುಕತೆ ನಡೆಸುವ ಬದಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರೊಂದಿಗೆ ಮಾತುಕತೆ ಏರ್ಪಡಿಸಬೇಕು. ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್‌ ವಿಟ್ಕಾಫ್‌ ಅಥವಾ ಜೇರೆಡ್‌ ಕುಶ್ನರ್‌ ನೇತೃತ್ವದ ಮಾತುಕತೆಗಳು ಯಶಸ್ವಿಯಾಗುವ ಸಾಗುವ ಸಾಧ್ಯತೆ ಇಲ್ಲ’ ಎಂದು ಇರಾನ್‌ ಹೇಳಿದೆ ಎನ್ನಲಾಗಿದೆ.

ಸೌದಿ ಜತೆ ಪಾಕ್‌ ಪ್ರಧಾನಿ ಚರ್ಚೆ:ಈ ನಡುವೆ, ಸಂಧಾನದಲ್ಲಿ ಮಧ್ಯಸ್ಥಿಕೆ ವಹಿಸಲು ಉತ್ಸುಕರಾಗಿರುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್, ಸೌದಿ ಅರೇಬಿಯಾ ರಾಜಕುವರ ಮೊಹಮ್ಮದ್ ಬಿನ್‌ ಸಲ್ಮಾನ್‌ ಅವರಿಗೆ ತಮ್ಮ ಯತ್ನಗಳ ಮಾಹಿತಿ ನೀಡಿದ್ದಾರೆ.

==

ಅಮೆರಿಕದ ಶಾಂತಿ ಮಾತುಕತೆ ಬಗ್ಗೆ ಗೊತ್ತಿಲ್ಲ: ಇಸ್ರೇಲ್‌

ಟೆಲ್‌ ಅವಿವ್‌ (ಇಸ್ರೇಲ್‌): ಇರಾನ್‌ ಜತೆ ನಡೆಯುತ್ತಿರುವ ಯುದ್ಧ ನಿಲ್ಲಿಸುವ ಬಗ್ಗೆ ಅಮೆರಿಕ ಶಾಂತಿ ಮಾತುಕತೆ ನಡೆಸುತ್ತಿರುವ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಇರಾನ್‌ನಲ್ಲಿರುವ ಇಸ್ರೇಲ್‌ ರಾಯಭಾರಿ ಡ್ಯಾನಿ ಡ್ಯಾನನ್ ಹೇಳಿದ್ದಾರೆ.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಾಂತಿ ಮಾತುಕತೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇರಾನ್‌ ವಿರುದ್ಧದ ಹೋರಾಟದ ಅಭಿಯಾನ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

==

ಸೋಲನ್ನು ಒಪ್ಪಂದ ಎಂದು ಕರೆಯಬೇಡಿ: ಟ್ರಂಪ್‌ಗೆ ಇರಾನ್‌ ಟಾಂಗ್‌

ಟೆಹ್ರಾನ್: ಇರಾನ್ ಜತೆ ಅಮೆರಿಕ ಫಲಪ್ರದ ಸಂಧಾನ ಮಾತುಕತೆ ನೆಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬಗ್ಗೆ ಕುಹಕವಾಡಿರುವ ಇರಾನ್ ಸೇನಾ ವಕ್ತಾರರು. ‘ನಿಮ್ಮ ಸೋಲನ್ನು ಶಾಂತಿ ಒಪ್ಪಂದ ಎಂದು ಕರೆಯಬೇಡಿ’ ಎಂದು ಟಾಂಗ್‌ ನೀಡಿದ್ದಾರೆ. ಹೀಗಾಗಿ ಟ್ರಂಪ್‌ ಪ್ರಸ್ತಾವದ ಬಗ್ಗೆ ಇರಾನ್‌ ತಳೆದಿರುವ ನಿಲುವು ಅನಿಶ್ಚಿತತೆಯನ್ನು ಹೆಚ್ಚಿಸಿದೆ.ಮಾತುಕತೆಗಳ ಕುರಿತು ಟ್ರಂಪ್ ಅವರ ಹೇಳಿಕೆಗಳನ್ನು ಇರಾನಿನ ಮಿಲಿಟರಿ ವಕ್ತಾರರು ತಳ್ಳಿಹಾಕಿ, ‘ನಿಮ್ಮ ಸೋಲನ್ನು ಒಪ್ಪಂದ ಎಂದು ಕರೆಯಬೇಡಿ. ನಮ್ಮಂತಹ ವ್ಯಕ್ತಿ ನಿಮ್ಮಂತಹ ವ್ಯಕ್ತಿಯೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಈಗ ಅಲ್ಲ, ಭವಿಷ್ಯದಲ್ಲಿಯೂ ಅಲ್ಲ’ ಎಂದು ಅವರು ಹೇಳಿದರು.