ಜಾರ್ಖಂಡ್‌ ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂ ಸ್ಥಾನ ಕೈತಪ್ಪಿದ ಚಂಪೈ ಸೊರೇನ್‌ ಶೀಘ್ರ ಬಿಜೆಪಿ ಸೇರ್ಪಡೆ ವದಂತಿ

| Published : Aug 18 2024, 01:55 AM IST / Updated: Aug 18 2024, 04:52 AM IST

ಜಾರ್ಖಂಡ್‌ ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂ ಸ್ಥಾನ ಕೈತಪ್ಪಿದ ಚಂಪೈ ಸೊರೇನ್‌ ಶೀಘ್ರ ಬಿಜೆಪಿ ಸೇರ್ಪಡೆ ವದಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆಗೂ ಮುನ್ನ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ, ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಬಿಜೆಪಿ ಸೇರಲಿದ್ದಾರೆ ಎಂಬ ಭಾರೀ ವದಂತಿ ಹಬ್ಬಿದೆ.

ನವದೆಹಲಿ: ಮುಂಬರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆಗೂ ಮುನ್ನ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ, ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಬಿಜೆಪಿ ಸೇರಲಿದ್ದಾರೆ ಎಂಬ ಭಾರೀ ವದಂತಿ ಹಬ್ಬಿದೆ. 

ಅಕ್ರಮ ಆಸ್ತಿ ಪ್ರಕರಣದಲ್ಲಿ ಜೆಎಂಎಂ ನೇತಾರ ಹೇಮಂತ್‌ ಸೊರೇನ್‌ ಬಂಧನಕ್ಕೊಳಗಾದ ವೇಳೆ ಚಂಪೈ ಅವರನ್ನು ದಿಢೀರ್‌ ಸಿಎಂ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಹೇಮಂತ್‌ಗೆ ಜಾಮೀನು ಸಿಕ್ಕು ಹೊರಬಂದ ಬೆನ್ನಲ್ಲೇ ಅಷ್ಟೇ ದಿಢೀರನೆ ಚಂಪೈ ಅವರನ್ನು ಸಿಎಂ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಇದರಿಂದ ಬೇಸರಗೊಂಡಿರುವ ಅವರು ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಗೂ ಮುನ್ನ ಬಿಜೆಪಿ ಪಾಳಯ ಸೇರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ಅರ್ಧ ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ದಾಟಿದ ಮೊದಲ ರಾಜ್ಯ ಮಹಾರಾಷ್ಟ್ರ: ಹಿರಿಮೆ

ನಾಗಪುರ: ಮಹಾರಾಷ್ಟ್ರ ರಾಜ್ಯ ಸರ್ಕಾರ, ಅರ್ಧ ಟ್ರಿಲಿಯನ್‌ ಡಾಲರ್‌ (ಅರ್ಧ ಲಕ್ಷ ಕೋಟಿ ರು.) ಆರ್ಥಿಕತೆ ಹೊಂದಿದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ನಾಗಪುರದಲ್ಲಿನ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ನಡೆಸಿ ಮಾತನಾಡಿದ ಅವರು,‘2027-28ರಲ್ಲಿ ಭಾರತವು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ರಾಷ್ಟ್ರವಾಗುವ ಗುರಿ ಇರಿಸಿಕೊಂಡಿದೆ. 

ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ಅರ್ಧ ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ದಾಟಿದೆ. ಈ ದಾಖಲೆ ಮಾಡಿದ ಮೊದಲ ರಾಜ್ಯವಾಗಿದೆ. ಈ ಮೂಲಕ ಆರ್ಥಿಕತೆಯಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿದೆ. ರಾಜ್ಯದ ಈ ಸಾಧನೆ ದೇಶವನ್ನು ಟ್ರಿಲಿಯನ್‌ ಡಾಲರ್‌ ಎಕಾನಮಿ ಮಾಡುವಲ್ಲಿ ರಾಜ್ಯದ ಅವಿರತ ಪ್ರಯತ್ನ ಹಾಗೂ ಸಫಲತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಹೇಳಿದರು.

ಸರ್ಕಾರಿ ಹುದ್ದೆಗಳಿಗೆ ತಜ್ಞರ ನೇಮಕಾತಿ, ಎಸ್ಟಿ, ಎಸ್ಟಿ ಮೀಸಲು ತಡೆವ ಯತ್ನ: ಖರ್ಗೆ

ನವದೆಹಲಿ: ಕೇಂದ್ರ ಸರ್ಕಾರ ಕೆಲ ಉನ್ನತ ಹುದ್ದೆಗಳಿಗೆ ವಿವಿಧ ವಲಯಗಳ ತಜ್ಞರನ್ನು ನೇರವಾಗಿ ನೇಮಕ ಮಾಡಲು ಮುಂದಾಗಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳನ್ನು ಮೀಸಲಾತಿಯಿಂದ ದೂರವಿಡುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಖರ್ಗೆ, ‘ಸಂವಿಧಾನವನ್ನು ಕಿತ್ತು ಹಾಕಿದ ಬಿಜೆಪಿ ಮೀಸಲಾತಿ ಮೇಲೆ ದುಪ್ಪಟ್ಟು ದಾಳಿ ಮಾಡುತ್ತಿದೆ. ಮೋದಿ ಸರ್ಕಾರ, ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿ, ನಿರ್ದೇಶಕರು, ಉಪ ಕಾರ್ಯದರ್ಶಿ ಹುದ್ದೆ ಸೇರಿದಂತೆ ಸುಮಾರು 45 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಜಾಹೀರಾತು ನೀಡಿದೆ. ಇದರಲ್ಲಿ ಎಸ್‌ಸಿ. ಎಸ್ಟಿ, ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ಇದೆಯೇ? ’ ಎಂದು ಪ್ರಶ್ನಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯ ಗುಂಡಿಕ್ಕಿ ಹತ್ಯೆ

ವಾಷಿಂಗ್ಟನ್‌: ಅಮೆರಿಕದ ಉತ್ತರ ಕೆರೋಲಿನಾದಲ್ಲಿ ಅಂಗಡಿ ನಡೆಸುತ್ತಿದ್ದ, ಭಾರತೀಯ ಮೂಲದ 36 ವರ್ಷದ ಮೈನಾಂಕ್ ಪಟೇಲ್ ಎನ್ನುವ ವ್ಯಕ್ತಿಯನ್ನು ಬಾಲಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಂಗಡಿ ಕಳ್ಳತನಕ್ಕೆ ಬಂದಿದ್ದ ಅಪ್ರಾಪ್ತ ಬಾಲಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. 

ಮೃತ ಮೈನಾಂಕ್ ಪಟೇಲ್ ಮೂಲತಃ ವಡೋದರ ಮೂಲದವರು. ಉತ್ತರ ಕೆರೋಲಿನಾದಲ್ಲಿ ಅಂಗಡಿ ನಡೆಸುತ್ತಿದ್ದರು. ಶನಿವಾರ ಮೈನಾಂಕ್ ಅಂಗಡಿಗೆ ಬಂದಿದ್ದ ಅಪ್ರಾಪ್ತ ಬಾಲಕನೊಬ್ಬ ಕಳ್ಳತನಕ್ಕೆ ಯತ್ನಿಸಿದ್ದು, ಈ ವೇಳೆ ಅದಕ್ಕೆ ಅಡ್ಡಿಪಡಿಸಿದ ಮೈನಾಂಕ್ ಪಟೇಲ್ ಮೇಲೆ ಗುಂಡು ಹಾರಿಸಿದ್ದಾನೆ. ಬಾಲಾಪರಾಧಿ ಗುಂಡು ಹಾರಿಸಿ,ಬಳಿಕ ಅಲ್ಲಿಂದ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಲಾಪರಾಧಿಯನ್ನು ಬಂಧಿಸಿದ್ದಾರೆ. ಪಟೇಲ್‌, ಗರ್ಭಿಣಿ ಪತ್ನಿ ಮತ್ತು 5 ವರ್ಷದ ಮಗುವನ್ನು ಅಗಲಿದ್ದಾರೆ.