ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್‌ಗಳು ಏಕಕಾಲಕ್ಕೆ ಸ್ಫೋಟ : ರಹಸ್ಯ ಕೊನೆಗೂ ಬಯಲು

| Published : Sep 20 2024, 01:31 AM IST / Updated: Sep 20 2024, 05:40 AM IST

ಸಾರಾಂಶ

ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರ ರಹಸ್ಯ ಕೊನೆಗೂ ಬಯಲಾಗಿದೆ.

ಬೈರೂತ್‌: ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರ ರಹಸ್ಯ ಕೊನೆಗೂ ಬಯಲಾಗಿದೆ. ಈ ಘಟನೆಯ ಹಿಂದೆ ಇಸ್ರೇಲ್‌ನ ಕೈವಾಡದ ಶಂಕೆ ಇತ್ತಾದರೂ, ಇದೀಗ ಪೇಜರ್‌ ತಯಾರಿಸಿದ್ದೇ ಇಸ್ರೇಲಿನ ಕಂಪನಿ ಎಂಬ ಸ್ಫೋಟಕ ಮಾಹಿತಿ ಒಳಗೊಂಡ ವರದಿಯನ್ನು ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಪ್ರಕಟಿಸಿದೆ.

ಸ್ಫೋಟಗೊಂಡ ಪೇಜರ್‌ಗಳನ್ನು ಹಂಗರಿ ಮೂಲದ ಬಿಎಸಿ ಕನ್ಸಲ್ಟಿಂಗ್‌ ಎಂಬ ಕಂಪನಿ ತಯಾರಿಸಿತ್ತು. ವಾಸ್ತವವಾಗಿ ಈ ಕಂಪನಿ ಇಸ್ರೇಲಿ ಮೂಲದ್ದು ಎಂದು ಪತ್ರಿಕೆ ವರದಿ ಮಾಡಿದೆ.

ಬಿಎಸಿ ಕಂಪನಿ ಬೇರೆ ಗ್ರಾಹಕರಿಗೆ ಸಾಮಾನ್ಯ ಪೇಜರ್‌ಗಳನ್ನು ಉತ್ಪಾದಿಸಿದರೆ ಹಿಜ್ಬುಲ್ಲಾ ಉಗ್ರರಿಗಾಗಿ ಲೇಸರ್‌ ಬ್ಯಾಟರಿಗಳನ್ನು ಒಳಗೊಂಡ ಪೇಜರ್‌ಗಳನ್ನು ತಯಾರಿಸಿ ಪೂರೈಸುತ್ತಿತ್ತು.

2022ರಲ್ಲಿ ಮೊದಲ ಬಾರಿಗೆ ಈ ಪೇಜರ್‌ಗಳು ಸಣ್ಣ ಪ್ರಮಾಣದಲ್ಲಿ ಲೆಬನಾನ್‌ಗೆ ಪೂರೈಕೆ ಮಾಡಲಾಗಿತ್ತು. ಹಿಜ್ಬುಲ್ಲಾ ನಾಯಕ ಹಸನ್ ನಸ್ರುಲ್ಲಾ ಮೊಬೈಲ್‌ ಫೋನ್‌ಗಳ ಬಳಕೆಯನ್ನು ನಿಷೇಧಿಸಿದ ಬಳಿಕ ಹಿಜ್ಬುಲ್ಲಾ ಉಗ್ರರು ಬಿಎಸಿ ಕಂಪನಿ ತಯಾರಿಸಿದ ಪೇಜರ್‌ಗಳನ್ನು ಉಗ್ರರು ಬಳಸುವುದಕ್ಕೆ ಪ್ರಾರಂಭಿಸಿದ್ದರು.

ಈ ಕುರಿತು ಸಂಪೂರ್ಣ ಮಾಹಿತಿ ಹೊಂದಿದ್ದ ಇಸ್ರೇಲಿ ಸೇನಾ ಪಡೆ ಮತ್ತು ಗುಪ್ತಚರ ಸಂಸ್ಥೇ ಮೊಸಾದ್‌, ಮಂಗಳವಾರ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್‌ಗಳನ್ನು ಸ್ಫೋಟಿಸಿತ್ತು. ಈ ವೇಳೆ 15 ಜನರು ಸಾವನ್ನಪ್ಪಿ, 3000ಕ್ಕೂ ಹೆಚ್ಚು ಅಧಿಕ ಜನರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಗುರುವಾರ ವಾಕಿಟಾಕಿ, ರೇಡಿಯೋ ಸೆಟ್‌, ಸೋಲಾರ್‌ ಸಿಸ್ಟಮ್‌ಗಳನ್ನೂ ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲೂ 8 ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಗಾಯಗೊಂಡಿದ್ದರು. ಇವುಗಳನ್ನೂ ಇಸ್ರೇಲಿ ಕಂಪನಿಗಳೇ ಉತ್ಪಾದಿಸಿದ್ದೇವೆ ಎಂಬುದರ ಮಾಹಿತಿ ಇನ್ನೂ ಹೊರಬಿದ್ದಿಲ್ಲ.