ಸಾರಾಂಶ
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ತನ್ನ 100ನೇ ಉಡ್ಡಯನವನ್ನು ಜ.29ರಂದು ಶ್ರೀಹರಿಕೋಟಾದಿಂದ ನಡೆಸಲಿದೆ. ಎನ್‌ವಿಎಸ್-02 ಉಪಗ್ರಹವನ್ನು ಹೊತ್ತು ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ಶ್ರೀಹರಿಕೋಟಾದ 2ನೇ ಉಡ್ಡಯನ ಕೇಂದ್ರದಿಂದ ನಭಕ್ಕೆ ಹಾರಲಿದೆ ಎಂದು ಇಸ್ರೋ ಹೇಳಿದೆ.
ಜಿಎಸ್‌ಎಲ್‌ವಿ- ಎಫ್ 15 ಸ್ವದೇಶಿ ಕ್ರಯೋಜೆನಿಕ್ ಹಂತದ ರಾಕೆಟ್ ಆಗಿದ್ದು, ಎನ್‌ವಿಎಸ್ ಸರಣಿಯ 2ನೇ ತಲೆಮಾರಿನ ನ್ಯಾವಿಗೇಷನಲ್ ಉಪಗ್ರಹವನ್ನು ಹೊತ್ತು ಜಿಯೋ ಸಿಂಕ್ರೋನೈಸ್ ಕಕ್ಷೆಗೆ ಸೇರಿಸಲಿದೆ. ಭೂಮಿಯ ನಿಖರವಾದ ಸಮಯ, ವೇಗ ಮತ್ತು ಸ್ಥಾನವನ್ನು ಬಳಕೆದಾರನಿಗೆ ಒದಗಿಸುತ್ತದೆ.
ಇಸ್ರೋ 1979ರ ಆ.10ರಂದು ಇಸ್ರೋ ಶ್ರೀಹರಿಕೋಟಾದಿಂದ ಮೊದಲ ಉಡ್ಡಯನ ನಡೆಸಿತ್ತು. ಇದಕ್ಕೂ ಮುನ್ನ ನ.21, 1963ರಂದು ಇಸ್ರಫ ತಿರುವನಂತಪುರದಿಂದ ನೈಕೆ- ಅಪಾಚೆ ಸೌಂಡಿಂಗ್ ರಾಕೆಟ್ ಅನ್ನು ಮೊದಲ ಸಲ ಹಾರಿಸಿತ್ತು.
ವ್ಯಾಪಾರಿಗಳ ಅನುಕೂಲಕ್ಕೆ ಬಂದಿದೆ ಜಿಯೋ ಸೌಂಡ್‌ಪೇ
ಮುಂಬೈ: ಜಿಯೋಭಾರತ್ ಮೊಬೈಲ್ ಹೊಸ ವೈಶಿಷ್ಟ್ಯವನ್ನು ಘೋಷಿಸಲಾಗಿದೆ. ಜಿಯೋಸೌಂಡ್‌ಪೇ ಪ್ರತಿ ಯುಪಿಐ ಪಾವತಿಗೆ ಶೀಘ್ರವಾಗಿ ಹಾಗೂ ಬಹುಭಾಷಾ ಧ್ವನಿಯ ದೃಢೀಕರಣವನ್ನು ಒದಗಿಸುವ ಮೂಲಕ ವ್ಯಾಪಾರದಲ್ಲಿ ಹೊಸ ಅನುಭವವನ್ನು ದೊರಕಿಸುತ್ತದೆ. ಈ ಮೂಲಕ ಚಿಕ್ಕ ಕಿರಾಣಿ ಅಂಗಡಿಗಳು, ತರಕಾರಿ ಮಾರಾಟಗಾರರು ಮತ್ತು ರಸ್ತೆಬದಿಯ ತಿನಿಸು ಮಾರಾಟಗಳಲ್ಲಿಯೂ ಅಡೆತಡೆ ಇಲ್ಲದೆ ವ್ಯಾಪಾರ ಚಟುವಟಿಕೆಗಳನ್ನು ಸುಲಭಗೊಳಿಸುತ್ತದೆ. ಪ್ರಸ್ತುತ ಈ ಸೌಂಡ್ ಬಾಕ್ಸ್‌ಗಾಗಿ ತಿಂಗಳಿಗೆ ಸುಮಾರು 125 ರು. ಪಾವತಿಸಬೇಕಿದ್ದು. ಜಿಯೋಸೌಂಡ್‌ಪೇ ಉಚಿತವಾಗಿದೆ. ಇದರಿಂದ ವ್ಯಾಪಾರಿಗಳಿಗೆ ವಾರ್ಷಿಕವಾಗಿ 1,500 ರು. ಉಳಿತಾಯವಾಗಲಿದೆ.
ಕೇಜ್ರಿವಾಲ್ ಹತ್ಯೆಗೆ ಕೇಂದ್ರ, ದೆಹಲಿ ಪೊಲೀಸರ ಪಿತೂರಿ: ಆಪ್
ನವದೆಹಲಿ : ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರ ಹತ್ಯೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಪಿತೂರಿ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಆರೋಪಿಸಿದೆ. ಹೀಗಾಗಿ ಪಂಜಾಬ್ ಪೊಲೀಸರು ಕಲ್ಪಿಸಿದ್ದ ಭದ್ರತೆಯನ್ನು ಮರುಸ್ಥಾಪಿಸಬೇಕೆಂದು ಅದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.ಗುರುವಾರ ಪಂಜಾಬ್ ಸರ್ಕಾರವು ಚುನಾವಣಾ ಆಯೋಗದ ಸೂಚನೆ ಮೇರೆಗೆ ಕೇಜ್ರಿವಾಲ್‌ಗೆ ನೀಡಿದ ಭದ್ರತೆ ಕಡಿತ ಮಾಡಿತ್ತು. ಅದರ ಬೆನ್ನಲ್ಲೇ ಈ ಆಗ್ರಹ ಕೇಳಿಬ₹ದಿದೆ.
‘ಫೆ.5ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ನ್ಯಾಯಯುತ ಫಲಿತಾಂಶದ ಆಧಾರಗಳು ಮತ್ತು ಅರವಿಂದ ಕೇಜ್ರಿವಾಲ್‌ಗೆ ಪಂಜಾಬ್ ಪೊಲೀಸರು ಒದಗಿಸಿದ್ದ ಭದ್ರತೆಯನ್ನು ಮರುಸ್ಥಾಪಿಸಬೇಕು. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ’ ಎಂದು ದೆಹಲಿ ಮುಖ್ಯಮಂತ್ರಿ ಅತಿಷಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಲ್ಲಿಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಕೇಜ್ರಿವಾಲ್ ಮೇಲಾದ ದಾಳಿಗಳ ದಾಖಲೆಗಳನ್ನು ನೀಡಿದರು.ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ದೆಹಲಿ ಪೊಲೀಸರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಹಾರಾಷ್ಟ್ರದಲ್ಲೂ ಬಸ್ ಪ್ರಯಾಣ ದರ ಶೇ.15ರಷ್ಟು ಏರಿಕೆ
ಮುಂಬೈ: ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಪಕ್ಕದ ಮಹಾರಾಷ್ಟ್ರವೂ ಸಹ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಮುಂಬೈನಲ್ಲಿ ಆಟೋ ರಿಕ್ಷಾ ಮತ್ತು ಕಪ್ಪು-ಹಳದಿ ಟ್ಯಾಕ್ಸಿ ದರವನ್ನು ಹೆಚ್ಚಳ ಮಾಡಲಾಗಿ.ಮಹಾರಾಷ್ಟ್ರ ಸಾರಿಗೆ ಇಲಾಖೆಯು ಜ.25ರಿಂದ ಅನ್ವಯವಾಗುವಂತೆ ಎಲ್ಲಾ ಸಾರಿಗೆ ಬಸ್ಸಿನ ದರವನ್ನು ಶೇ.14.95ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಮುಂಬೈ ವ್ಯಾಪ್ತಿಯ ಆಟೋ ರಿಕ್ಷಾ ಕನಿಷ್ಠ ಬೆಲೆಯನ್ನು 23 ರು.ನಿಂದ 26 ರು.ಗೆ, ಕಪ್ಪು-ಹಳದಿ ಟ್ಯಾಕ್ಸಿ ಕನಿಷ್ಠ ದರ 28 ರು.ನಿಂದ 31 ರು.ಗೆ, ಎಸಿ ಟ್ಯಾಕ್ಸಿ ದರವನ್ನು 1.5 ಕಿ.ಮೀ.ಗೆ 40 ರು.ನಿಂದ 48 ರು.ಗೆ ಹೆಚ್ಚಳ ಮಾಡಲಾಗಿದೆ.
83 ಸಾವಿರ ರು. ದಾಟಿದ ಚಿನ್ನದ ಬೆಲೆ: ದಾಖಲೆ
ನವದೆಹಲಿ: ಸತತ 8ನೇ ದಿನವೂ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಶುಕ್ರವಾರ ಒಂದೇ ಬಾರಿಗೆ 200 ರು. ಹೆಚ್ಚಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಶೇ.99.9 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 83,100 ರು. ಆಗಿದೆ.ಬೆಂಗಳೂರಲ್ಲಿ 99.5 ಕ್ಯಾರೆಟ್ ಚಿನ್ನದ ದರ 84,870 ರು. ಹಾಗೂ 77,800 ರು. ದಾಖಲಾಗಿದೆ. ಬೆಳ್ಳಿ ಬೆಲೆ 1 ಕೇಜಿಗೆ 96,800 ರು.ಗೆ ಏರಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದಿನ ಮೇಲೆ ಸುಂಕ ಹೇರುವ ಸಂಭವ ಹಾಗೂ ಅನ್ಯ ನೀತಿಗಳಿಂದಾಗಿ ಚಿನ್ನದ ಬೆಲೆ ಏರಿದೆ ಎಂದು ಅಂದಾಜಿಸಲಾಗಿದೆ.