15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?

| Published : Aug 04 2025, 11:45 PM IST

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ವಿದ್ಯುತ್‌ ಚಾಲಿತ (ಇವಿ) ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದಕ್ಕೆ ಕೈಹಾಕುವ ಸಾಧ್ಯತೆ ಇದೆ. ಎಲೆಕ್ಟ್ರಿಕ್‌ ಕಾರುಗಳು, ಬಸ್‌ಗಳು, ಟೆಂಪೋಗಳು, ಲಾರಿಗಳನ್ನು 15 ವರ್ಷಗಳ ಬಳಿಕವೂ ಬಳಸಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ಹಾಲಿ ಇರುವ ನಿಯಮಾವಳಿಗಳಿಗೆ ತಿದ್ದುಪಡಿ ತರುವ ನಿರೀಕ್ಷೆ ಇದೆ.

- ಕೇಂದ್ರದಿಂದ ವಾಹನ ಮಾರಾಟ ನೀತಿ ಬದಲು?

- ಇವಿ ಮಾರಾಟ ಹೆಚ್ಚಳ ನಿಟ್ಟಿನಲ್ಲಿ ಮಹತ್ವದ ಕ್ರಮನವದೆಹಲಿ: ದೇಶದಲ್ಲಿ ವಿದ್ಯುತ್‌ ಚಾಲಿತ (ಇವಿ) ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದಕ್ಕೆ ಕೈಹಾಕುವ ಸಾಧ್ಯತೆ ಇದೆ. ಎಲೆಕ್ಟ್ರಿಕ್‌ ಕಾರುಗಳು, ಬಸ್‌ಗಳು, ಟೆಂಪೋಗಳು, ಲಾರಿಗಳನ್ನು 15 ವರ್ಷಗಳ ಬಳಿಕವೂ ಬಳಸಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ಹಾಲಿ ಇರುವ ನಿಯಮಾವಳಿಗಳಿಗೆ ತಿದ್ದುಪಡಿ ತರುವ ನಿರೀಕ್ಷೆ ಇದೆ.

ಸದ್ಯ ಖರೀದಿ ಮಾಡುವ ಯಾವುದೇ ವಾಹನಗಳ ನೋಂದಣಿ ಕೇವಲ 15 ವರ್ಷಗಳಿಗಷ್ಟೇ ಸೀಮಿತ. ಆ ಬಳಿಕ ಆ ವಾಹನಗಳ ಮರು ನೋಂದಣಿ ಕಡ್ಡಾಯ. ದೆಹಲಿಯಲ್ಲಿ ಈಗಾಗಲೇ 15 ವರ್ಷಗಳಿಗಿಂತ ಹಳೆಯ ಡೀಸೆಲ್‌, ಪೆಟ್ರೋಲ್‌ ವಾಹನಗಳಿಗೆ ನಿರ್ಬಂಧವಿದೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ವ್ಯಕ್ತಿಗಳು ದುಬಾರಿ ವೆಚ್ಚದ ಇ-ವಾಹನಗಳತ್ತ ಮುಖಮಾಡಲು ಹಿಂದೇಟು ಹಾಕುತ್ತಿದ್ದಾರೆ. ನೀತಿ ಆಯೋಗದ ಸದಸ್ಯ ರಾಜೀವ್‌ ಗವ್ಬಾ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಉನ್ನತಮಟ್ಟದ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ.

ಶೇ.30ರ ಗುರಿ:

ದೇಶವು 2030ರಲ್ಲಿ ಶೇ.30 ಇ-ವಾಹನಗಳ ಬಳಕೆ ಗುರಿ ಇಟ್ಟುಕೊಂಡಿದೆ. ಆದರೆ 2024ರಲ್ಲಿ ಈ ಪ್ರಮಾಣ ಕೇವಲ ಶೇ.7.6ರಷ್ಟಿತ್ತು. ಇದರಲ್ಲೂ ವಿದ್ಯುತ್‌ ಚಾಲಿತ ದ್ವಿಚಕ್ರವಾಹನಗಳ ಸಂಖ್ಯೆಯೇ ಹೆಚ್ಚು. ಇ-ಬಸ್‌ಗಳು ಹೆಚ್ಚಾಗುತ್ತಿದ್ದರೂ ಅವನ್ನೆಲ್ಲ ಸರ್ಕಾರಿ ಸಾರಿಗೆಗಳೇ ಖರೀದಿಸುತ್ತಿವೆ. ಇನ್ನು ಬಹುತೇಕ 15 ವರ್ಷಕ್ಕಿಂತ ಹಳೆಯ ಡೀಸೆಲ್‌ ಬಸ್‌ಗಳು ಖಾಸಗಿಯವರೇ ಓಡಿಸುತ್ತಿದ್ದಾರೆ. ಹೀಗಾಗಿ ನೀತಿ ಆಯೋಗದ ಸಿಇಒ ಬಿವಿಆರ್‌ ಸುಬ್ರಹ್ಮಣ್ಯಂ ಅವರು, ಇ-ಚಾಲಿತ ವಾಹನಗಳಿಗೆ ವಾಹನದ ಬಳಕೆ ಅವಧಿಯನ್ನು 15 ವರ್ಷಗಳಿಗೆ ಸೀಮಿತಗೊಳಿಸುವ ನಿಯಮಾವಳಿ ತೆಗೆದುಹಾಕಿದರೆ ಮಾರಾಟ ಹೆಚ್ಚಾಗಬಹುದು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.