ಹರ್‍ಯಾಣ ಡ್ರಾಮಾ: ಖಟ್ಟರ್‌ ಔಟ್‌, ಸೈನಿ ಹೊಸ ಸಿಎಂ

| Published : Mar 13 2024, 02:04 AM IST / Updated: Mar 13 2024, 02:05 AM IST

ಸಾರಾಂಶ

ಹರ್‍ಯಾಣದಲ್ಲಿ ಮಂಗಳವಾರ ನಡೆದ ದಿಢೀರ್‌ ಹೈಡ್ರಾಮಾದಲ್ಲಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ, ಒಬಿಸಿ ನಾಯಕ ನಯಬ್‌ ಸಿಂಗ್‌ ಸೈನಿ ಆಯ್ಕೆಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಂಡೀಗಢ: ಹರ್‍ಯಾಣದಲ್ಲಿ ಮಂಗಳವಾರ ನಡೆದ ದಿಢೀರ್‌ ಹೈಡ್ರಾಮಾದಲ್ಲಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ, ಒಬಿಸಿ ನಾಯಕ ನಯಬ್‌ ಸಿಂಗ್‌ ಸೈನಿ ಆಯ್ಕೆಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ 5 ಬಿಜೆಪಿ ಶಾಸಕರು ಕೂಡ ಸಚಿವರಾಗಿ ಶಪಥಗ್ರಹಣ ಮಾಡಿದ್ದಾರೆ.

ಏತನ್ಮಧ್ಯೆ, ಈವರೆಗೆ ಮಿತ್ರಪಕ್ಷವಾಗಿದ್ದ ಜೆಜೆಪಿಯನ್ನು ಬಿಜೆಪಿ ಕೈಬಿಟ್ಟಿದೆ. ಸೈನಿ ಅವರ ಹೊಸ ಸಂಪುಟದಲ್ಲಿ ಈವರೆಗೆ ಖಟ್ಟರ್‌ ಅಧೀನದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ದುಷ್ಯಂತ್‌ ಚೌಟಾಲಾಗೆ ಯಾವುದೇ ಸ್ಥಾನಮಾನ ಲಭಿಸಿಲ್ಲ. ಹೀಗಾಗಿ ಮೈತ್ರಿ ಬಹುತೇಕ ಮುರಿದುಬಿದ್ದಿದೆ. ಬಿಜೆಪಿ ನಡೆಯನ್ನು ಜೆಜೆಪಿ ಮುಖಂಡ ಅಭಯ ಚೌಟಾಲಾ ‘ದ್ರೋಹ’ ಎಂದು ಕರೆದಿದ್ದಾರೆ.ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಮತ್ತು ಅಕ್ಟೋಬರ್‌ನಲ್ಲಿ ನಡೆವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಬಿಜೆಪಿ ಈ ಬದಲಾವಣೆ ಮಾಡಿದೆ. ಹರ್ಯಾಣದಲ್ಲಿ ಖಟ್ಟರ್‌ ನಾಯಕತ್ವದ ಬಗ್ಗೆ ಜನಾಕ್ರೋಶ ಇತ್ತು. ಹೀಗಾಗಿ ಚುನಾವಣೆಗೂ ಮುನ್ನ ಜನಾಕ್ರೋಶ ತಣಿಸಲು ಬಿಜೆಪಿ ನಾಯಕತ್ವ ಬದಲಿಸಿದೆ ಎನ್ನಲಾಗಿದೆ.

ಜೆಜೆಪಿಯ 5 ಶಾಸಕರು ಬಿಜೆಪಿಗೆ?:ಆಡಳಿತಾರೂಢ ಬಿಜೆಪಿ ಮತ್ತು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ನಡುವೆ ಇತ್ತೀಚೆಗೆ ಎಲ್ಲವೂ ಸರಿಯಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿಯಲಿವೆ ಎಂಬ ಸುದ್ದಿ ಹರಿದಾಡಿತ್ತು. ಅಷ್ಟರಲ್ಲೇ ನಡೆದ ದಿಢೀರ್‌ ಬೆಳವಣಿಗೆ ಸ್ವತಃ ಜೆಜೆಪಿಯಲ್ಲೂ ಅಚ್ಚರಿ ಮೂಡಿಸಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷ ಮಂಗಳವಾರ ಜೆಜೆಪಿ ನಾಯಕ ದುಷ್ಯಂತ್‌ ಚೌಟಾಲಾ ಸಭೆ ನಡೆಸಿದರೂ, ಪಕ್ಷದ 10 ಶಾಸಕರ ಪೈಕಿ 5 ಜನರು ಗೈರಾಗಿದ್ದರು. ಅವರೆಲ್ಲಾ ಬಿಜೆಪಿ ಕಡೆ ವಾಲಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಜೆಜೆಪಿ ಇಲ್ಲದಿದ್ದರೂ ಬಿಜೆಪಿ ಸರ್ಕಾರ ಸೇಫ್‌:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 41, ಕಾಂಗ್ರೆಸ್‌ 30, ಜೆಜೆಪಿ 10 ಮತ್ತು ಇತರೆ ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದರು. 90 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಕೊರತೆ ಇದ್ದ ಕಾರಣ ಜೆಜೆಪಿ ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿತ್ತು. ಬಳಿಕ 7 ಪಕ್ಷೇತರರೂ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಈಗ 7 ಪಕ್ಷೇತರರು ಹಾಗೂ 5 ಬಂಡಾಯ ಜೆಜೆಪಿ ಶಾಸಕರ ಬೆಂಬಲ ಬಿಜೆಪಿಗೆ ಲಭ್ಯ ಆಗಲಿರುವ ಕಾರಣ ಜೆಜೆಪಿಯನ್ನು ಬಿಜೆಪಿ ಕೈಬಿಟ್ಟಿದೆ ಎನ್ನಲಾಗಿದೆ.