ಸಿಎಎಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ

| Published : Mar 13 2024, 02:01 AM IST

ಸಾರಾಂಶ

ಸುಪ್ರೀಂ ಕೋರ್ಟ್‌ ಮೊರೆ ಹೋದ ಮುಸ್ಲಿಂ ಲೀಗ್‌, ಡಿವೈಎಫ್ಐ ಸಂಘಟನೆಗಳು ತೀರ್ಪು ಬರುವವರೆಗೂ ಸಿಎಎ ಜಾರಿಗೆ ತಡೆ ನೀಡಲು ಮನವಿ ಮಾಡಿವೆ.

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಮರ್ಪಕ ಕಾನೂನುಗಳನ್ನು ರೂಪಿಸಿ ಕೇಂದ್ರ ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿ ಜಾರಿ ಮಾಡಿದ ಮರುದಿನವೇ ಅಖಿಲ ಭಾರತ ಮುಸ್ಲಿಂ ಲೀಗ್‌ ಹಾಗೂ ಡಿಎವೈಎಫ್ಐ ಸೇರಿ ಹಲವು ಸಂಘಟನೆಗಳು ಕಾಯ್ದೆ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ,

ಕೋರ್ಟಲ್ಲಿ ಎಲ್ಲ ವಿಚಾರಣೆ ಮುಕ್ತಾಯವಾಗುವವರೆಗೂ ಕಾಯ್ದೆ ಜಾರಿಗೆ ತಡೆ ನೀಡಿ ಆದೇಶಿಸಬೇಕೆಂದು ಮನವಿ ಸಲ್ಲಿಸಲಾಗಿದೆ.

ಮುಸ್ಲಿಂ ಲೀಗ್‌ ಮನವಿ ಸಲ್ಲಿಸಿ, ‘ಸುಪ್ರೀಂ ಕೋರ್ಟ್‌ ಮತ್ತು ದೇಶದ ಇತರ ಕೋರ್ಟ್‌ಗಳಲ್ಲಿ ಸಿಎಎಗೆ ಸಂಬಂಧಿಸಿದಂತೆ 250ಕ್ಕೂ ಹೆಚ್ಚು ವಿಚಾರಣೆಗಳು ಚಾಲ್ತಿಯಲ್ಲಿವೆ. ಸರ್ಕಾರವು ಕಾಯ್ದೆ ಜಾರಿ ಮಾಡಲು 4.5 ವರ್ಷಗಳೇ ಕಾದಿರುವಾಗ ಪ್ರಕರಣದ ತೀರ್ಪು ಬರುವವರೆಗೂ ಕಾಯುವುದು ತಪ್ಪೇನಲ್ಲ. ಒಂದು ವೇಳೆ ಈಗ ಕೆಲವರಿಗೆ ಪೌರತ್ವ ಕೊಟ್ಟು ಬಳಿಕ ಸುಪ್ರೀಂ ಕೋರ್ಟ್‌ ಕಾಯ್ದೆಯನ್ನು ತನ್ನ ತೀರ್ಪಿನಲ್ಲಿ ಅಮಾನ್ಯ ಮಾಡಿದರೆ ಅವರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ’ ಎಂದು ಉಲ್ಲೇಖಿಸಿದೆ.

ಅಲ್ಲದೆ, ಮುಸ್ಲಿಮರಿಗೆ ಅರ್ಜಿ ಹಾಕಲು ಅವಕಾಶವಿಲ್ಲ ಎಂಬ ಅಂಶಕ್ಕೆ ಅದು ಆಕ್ಷೇಪಿಸಿದ್ದು, ಮುಸ್ಲಿಮರಿಗೂ ಪೌರತ್ವಕ್ಕೆ ಅರ್ಜಿ ಹಾಕಲು ಅನುಮತಿಸಲು ಕೋರಿದೆ.ಇದರ ಜೊತೆಗೆ ಡೆಮಾಕ್ರಟಿಕ್ ಯೂತ್‌ ಫೆಡರೇಷನ್‌ ಆಫ್‌ ಇಂಡಿಯಾ (ಡಿಎವೈಎಫ್‌ಐ) ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಕಾಯ್ದೆ ಜಾರಿಗೆ ತಾತ್ಕಾಲಿಕ ತಡೆ ಕೋರಿ ಅರ್ಜಿ ಸಲ್ಲಿಸಿದೆ.