ಸಾರಾಂಶ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 3ನೇ ಹಂತದ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಕಡೆಯ ಹಂತದ ಈ ಚುನಾವಣೆಯಲ್ಲಿ ಶೇ.68.72ರಷ್ಟು ಮತದಾನವಾಗಿದೆ.
ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 3ನೇ ಹಂತದ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಕಡೆಯ ಹಂತದ ಈ ಚುನಾವಣೆಯಲ್ಲಿ ಶೇ.68.72ರಷ್ಟು ಮತದಾನವಾಗಿದೆ. ಇದರೊಂದಿಗೆ ರಾಜ್ಯ ವಿಧಾನಸಭೆಗೆ ನಿಗದಿಯಾಗಿದ್ದ ಮೂರು ಹಂತದ ಮತದಾನ ಮುಕ್ತಾಯವಾದಂತೆ ಆಗಿದ್ದು, ಒಟ್ಟಾರೆ ಶೇ.63.45ರಷ್ಟು ಮತದಾನ ದಾಖಲಾಗಿದೆ. ಇದು ಕಳೆದ ಚುನಾವಣೆಯ ಪ್ರಮಾಣಕ್ಕಿಂತ ಕಡಿಮೆ. ಅ.8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಮಂಗಳವಾರ 40 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆಯಿತು. ಈ ಪ್ರಕ್ರಿಯೆ ಪೂರ್ಣ ಶಾಂತಿಯುತವಾಗಿತ್ತು. ಜನತೆ ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು ಕಂಡುಬಂತು. 40 ಕ್ಷೇತ್ರಗಳಿಗೆ ಒಟ್ಟು 415 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇ಼ಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.3 ಹಂತ: ಸೆ.18ರಂದು ನಡೆದ ಮೊದಲ ಹಂತದಲ್ಲಿ ಶೇ.61.38, ಸೆ.25ರಂದು ನಡೆದ 2ನೇ ಹಂತದಲ್ಲಿ ಶೇ.57.31ರಷ್ಟು ಮತ ಚಲಾವಣೆಯಾಗಿತ್ತು.