ಜನಾದೇಶವನ್ನು ಹತ್ತಿಕ್ಕಲು ಮೋದಿ ಯತ್ನ: ಜೈರಾಂ

| Published : Jun 06 2024, 01:45 AM IST

ಸಾರಾಂಶ

ಡೆಮಾಕ್ರಸಿಯಿಂದ ಡೆಮೊ-ಕರ್ಸಿಗೆ ಮೋದಿ ಯತ್ನ ನಡೆಸಿದ್ದು, ಅವರಲ್ಲಿ ನೈತಿಕತೆ ಇರುವುದೇ ಆದಲ್ಲಿ ರಾಜೀವ್‌ರಂತೆ ಮೋದಿ ಕೂಡ ಪ್ರಧಾನಿ ಕುರ್ಚಿ ಬಿಟ್ಟುಕೊಡಲಿ ಎಂದು ಸವಾಲೆಸೆದಿದ್ದಾರೆ.

ನವದೆಹಲಿ: ದೇಶಾದ್ಯಂತ ಜನರು ಮೋದಿಯ ವಿರುದ್ಧ ಜನಾದೇಶ ನೀಡಿದ್ದರೂ ಅವರು ಅದನ್ನು ಹತ್ತಿಕ್ಕುವ (ಡೆಮೊ-ಕರ್ಸಿ) ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ, ‘ನರೇಂದ್ರ ಮೋದಿಯ ವಿರುದ್ಧವಾಗಿ ಜನರು ತೀರ್ಪು ನೀಡಿದ್ದರೂ ತಮ್ಮ ಕುಗ್ಗಿದ ಎದೆಯನ್ನೇ ಬಡಿದುಕೊಂಡು ಹಂಗಾಮಿ ಪ್ರಧಾನಿ ಸತತವಾಗಿ ಮೂರನೇ ಸಲ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ಅಧಿಕಾರ ನೀಡಿರುವುದಾಗಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ನೆಹರು ಸತತ ಮೂರು ಬಾರಿ ಬಹುಮತ ಪಡೆದು ಅಧಿಕಾರಕ್ಕೇರಿದ್ದರು ಎಂಬುದನ್ನು ಮರೆಯಬಾರದು. ಅಲ್ಲದೆ 1989ರಲ್ಲಿ ಕಾಂಗ್ರೆಸ್‌ಗೆ 197 ಸೀಟು ಬಂದರೂ ರಾಜೀವ್‌ ಗಾಂಧಿ ನೈತಿಕತೆಯಿಂದ ತಮ್ಮ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟರು. ಅದೇ ರೀತಿ ಪ್ರಧಾನಿ ಮೋದಿಯೂ ಸಹ ತಮ್ಮ ಪ್ರಧಾನಿ ಸ್ಥಾನ ಬಿಟ್ಟುಕೊಡದೆ ಅಹಂಕಾರ ಮೆರೆಯುತ್ತಿದ್ದಾರೆ’ ಎಂದು ಟೀಕಿಸಿದರು.