ಸಾರಾಂಶ
ಜೈಸಲ್ಮೇರ್: ಕೃಷಿ ಭೂಮಿಗೆ ನೀರುಣಿಸಲು ರೈತರೊಬ್ಬರು ಬೋರ್‌ವೆಲ್ ಕೊರೆಸಿದ ವೇಳೆ, ಅದರಿಂದ ನದಿಯಂತೆ ನೀರು ಉಕ್ಕಿ ಹರಿದ ಅಚ್ಚರಿಯ ಘಟನೆ ರಾಜಸ್ಥಾನದ ಮರುಭೂಮಿ ಪ್ರದೇಶವಾದ ಜೈಸಲ್ಮೇರ್‌ನಲ್ಲಿ ನಡೆದಿದೆ. ಬೋರ್‌ವೆಲ್ ಸುತ್ತಲೂ ನೀರು ನಿಂತು ಕೆರೆ ನಿರ್ಮಾಣವಾಗಿದೆ. ಇದನ್ನು ನೋಡಿ 5000 ವರ್ಷಗಳ ಹಿಂದೆ ಭೂಸಮಾಧಿ ಆಯ್ತು ಎನ್ನಲಾದ, ಪುರಾಣಗಳಲ್ಲಿ ಬರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬೆಲ್ಲಾ ಸುದ್ದಿ ಹರಡಿದೆ.
ಜಸಲ್ಮೇರ್‌ನ ಮೋಹನ್‌ಗಢ ಕಾಲುವೆ ಪ್ರದೇಶದಲ್ಲಿ ರೈತರೊಬ್ಬರು ಬೋರ್ ಕೊರೆಸಿದ ವೇಳೆ ಅದರೊಳಗಿಂದ ಭಾರೀ ಪ್ರಮಾಣದ ಅನಿಲ ಮತ್ತು ನೀರು ಹೊರಚಿಮ್ಮಿದೆ. ಈ ಸದ್ದು ಕೇಳಿ ರೈತರು ಆತಂಕಗೊಂಡರೂ, ಬಳಿಕ ನೀರು ಹರಿದು ರೀತಿ ನೀಡಿ ಸಂಭ್ರಮಿಸಿದ್ದಾರೆ.ವಿಜ್ಞಾನಿಗಳು ಹೇಳಿದ್ದೇನು?:ಅಂತರ್ಜಲ ವಿಜ್ಞಾನಿ ಡಾ. ನಾರಾಯಣ ದಾಸ್ ಪ್ರಕಾರ, ನೀರು ಮೇಲ್ಮುಖವಾಗಿ ಚಲಿಸುವಾಗ ಉಂಟಾದ ಒತ್ತಡದಿಂದ ಹೀಗಾಗಿರಬಹುದು ಎಂದಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಆ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಹೇರಲಾಗಿದ್ದು, 500 ಮೀಟರ್ ಅಂತರದಲ್ಲಿ ಯಾರೂ ಸುಳಿಯದಂತೆ ಸೂಚಿಸಲಾಗಿದೆ. ಸರಸ್ವತಿ ನದಿ ಎಲ್ಲಿತ್ತು?:ಋಗ್ವೇದ ಸೇರಿ ಹಲವು ಪುರಾಣಗಳಲ್ಲಿ ಸರಸ್ವತಿ ನದಿಯ ಉಲ್ಲೇಖವನ್ನು ಕಾಣಬಹುದು. ಇದು ಸುಮಾರು 5000 ವರ್ಷಗಳ ಹಿಂದೆ ಹವಾಮಾನ ಹಾಗೂ ಟೆಕ್ಟಾನಿಕ್ ಪದರಗಳ ಚಲನೆಯಿಂದ ಒಣಗಿಹೋಗಿರಬಹುದು ಎಂಬ ನಂಬಿಕೆಯಿದೆ.