ಜಮ್ಷೆಡ್‌ಪುರದಲ್ಲಿ ನೀರವ ಮೌನ

| Published : Oct 11 2024, 11:46 PM IST

ಸಾರಾಂಶ

ಉದ್ಯಮಿ ರತನ್‌ ಟಾಟಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಟಾಟಾ ಸ್ಟೀಲ್ಸ್‌ ಮೂಲಕ ಖ್ಯಾತಿ ಪಡೆದಿರುವ ಜಾರ್ಖಂಡ್‌ನ ಜಮ್ಷೆಡ್‌ಪುರದಲ್ಲಿ ನೀರವ ಮೌನ ಆವರಿಸಿತ್ತು. ಜನರು ತಮ್ಮ ಎಂದಿನ ಚಟುವಟಿಕೆಯನ್ನು ಬದಿಗೊತ್ತಿ, ತಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಿರುವಂತೆ ಇದ್ದರು.

ರಾಂಚಿ: ಉದ್ಯಮಿ ರತನ್‌ ಟಾಟಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಟಾಟಾ ಸ್ಟೀಲ್ಸ್‌ ಮೂಲಕ ಖ್ಯಾತಿ ಪಡೆದಿರುವ ಜಾರ್ಖಂಡ್‌ನ ಜಮ್ಷೆಡ್‌ಪುರದಲ್ಲಿ ನೀರವ ಮೌನ ಆವರಿಸಿತ್ತು. ಜನರು ತಮ್ಮ ಎಂದಿನ ಚಟುವಟಿಕೆಯನ್ನು ಬದಿಗೊತ್ತಿ, ತಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಿರುವಂತೆ ಇದ್ದರು. ಎಲ್ಲರ ಮುಖದಲ್ಲಿಯೂ ದುಃಖ ಆವರಿಸಿತ್ತು. ಎಲ್ಲಾ ಬಗೆಯ ಜನರು ಸಹ ಟಾಟಾ ಸೆಂಟರ್‌ಗೆ ಭೇಟಿ ನೀಡಿ ರತನ್‌ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.

ಟಾಟಾ ಏಕೆ ಇಷ್ಟು ಪ್ರೀತಿ ಪಾತ್ರರು?

19ನೇ ಶತಮಾನದಲ್ಲಿ ಟಾಟಾ ಸಂಸ್ಥೆಯ ಪಿತಾಮಹ ಜಮ್ಷೆಡ್‌ಜಿ ಟಾಟಾ ಅವರು ಟಾಟಾ ಸ್ಟೀಲ್‌ ಮೂಲಕ ನಗರಕ್ಕೆ ಹೊಸ ಸ್ಪರ್ಶ ನೀಡಿದ್ದರು. ಜೊತೆಗೆ ಅಲ್ಲಿ ಹೊಸ ಹೊಸ ಅನ್ಷೇಷಣೆಗೆ ದಾರಿ ಮಾಡಿಕೊಟ್ಟರು. ಇವರ ಬಳಿಕ ರತನ್‌ ಟಾಟಾ ಅವರು ತಮ್ಮ ಹೊಸ ಬಗೆಯ ಆಲೋಚನೆಗಳ ಮೂಲಕ ಅತ್ಯಂತ ಹಿಂದುಳಿದ ಸ್ಥಳವನ್ನು ಜಾಗತಿಕ ನೆಲೆಗಟ್ಟಿಯಲ್ಲಿ ಪ್ರಜ್ವಲಿಸುವಂತೆ ಮಾಡಿದರು. ಇದು ಅಲ್ಲಿನ ಜನರಿಗೆ ಉದ್ಯೋಗ, ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡಿತ್ತು. ಜೊತೆಗೆ ರತನ್‌ ಟಾಟಾ ಅವರ ಗುಣಗಳು ಎಲ್ಲರಿಗೂ ಹತ್ತಿರವಾಗುವಂತೆ ಮಾಡಿತ್ತು. ಮಗುವಿನಿಂದ ಹಿಡಿದು ಹಿರಿಯರ ವರೆಗೂ ರತನ್‌ ಟಾಟಾರನ್ನು ಎಲ್ಲರೂ ಮೆಚ್ಚುತ್ತಿದ್ದರು.

ರತನ್‌ ಟಾಟಾ ಅವರ ಕೊಡುಗೆ:

ರತನ್‌ ಟಾಟಾ ಕೇವಲ ಕಂಪನಿ ಉದ್ಧಾರಕ್ಕಾಗಿ ಮಾತ್ರವಲ್ಲದೇ ಜನರ ಉನ್ನತಿಗೂ ದುಡಿಯುತ್ತಿದ್ದರು. ಇಡೀ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳನ್ನು ಆರೈಕೆ ಮಾಡು ಸಲುವಾಗಿಯೇ ವಿಶೇಷ ಆಸ್ಪತ್ರೆಗಳನ್ನು ಅವರು ಸ್ಥಾಪಿಸಿದರು. ಇವುಗಳ ಮೂಲಕ ಬಡ ಜನರಿಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆದ ದೊರೆಯುವಂತೆ ಮಾಡಿದರು.

ರತನ್‌ ಟಾಟಾರಿಗೆ ಭಾರತ ರತ್ನ ನೀಡಿ-ಬೇಡಿಕೆ:

ರತನ್‌ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಟಾಟಾ ಗ್ರೂಪ್‌ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ರಾಕೇಶ್ವರ್‌ ಪಾಂಡೆ, ಜೆ.ಆರ್‌.ಡಿ.ಟಾಟಾ ಅವರ ಬಳಿಕ ಜಮ್ಷೆಡ್‌ಪುರ ಮತ್ತು ಟಾಟಾ ಉದ್ಯೋಗಿಗಳ ಪರವಾಗಿ ತಮ್ಮ ಹೃದಯವನ್ನೇ ಮುಡಿಪಾಗಿಟ್ಟವರೆಂದರೆ ಅದು ರತನ್‌ ಟಾಟಾ. ಅವರಿಗೆ ಭಾರತ ರತ್ನ ನೀಡಬೇಕು’ ಎಂದು ಆಗ್ರಹಿಸಿದರು.