ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದ ಜಪಾನ್‌ನ ಟೊಮಿಕೋ ಇಟೂಕಾ ತಮ್ಮ 116ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಟೋಕಿಯೋ: ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದ ಜಪಾನ್‌ನ ಟೊಮಿಕೋ ಇಟೂಕಾ ತಮ್ಮ 116ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಟೂಕಾ ಕೇಂದ್ರ ಜಪಾನ್‌ನ ಆಶಿಯಾದ ಆರೈಕೆ ಕೇಂದ್ರವೊಂದರಲ್ಲಿ ಡಿ.29ರಂದು ಸಾವನ್ನಪ್ಪಿರುವುದಾಗಿ ಜಪಾನ್‌ನ ಹಿರಿಯರ ನೀತಿಗಳ ಉಸ್ತುವಾರಿ ತಿಳಿಸಿದ್ದಾರೆ. 

ಇವರು ಇಬ್ಬರು ಮಕ್ಕಳು ಮತ್ತು 5 ಮೊಮ್ಮಕ್ಕಳನ್ನು ಅಗಲಿದ್ದಾರೆ. 1908ರ ಮೇ.23ರಂದು ಜನಿಸಿ ಇಟೂಕಾರನ್ನು, 117 ಪ್ರಾಯದ ಮರಿಯಾ ಬ್ರಾನ್ಯಾಸ್‌ ನಿಧನದ ಬಳಿಕ ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆ ಗುರುತಿಸಿತ್ತು. ಇದೀಗ ಇಟೂಕಾರ ಅಗಲಿಕೆಯ ಬಳಿಕ ಅವರಿಗಿಂತ 16 ವರ್ಷ ಕಿರಿಯರಾದ ಬ್ರಜಿಲ್‌ನ ನನ್ ಇನಾ ಕ್ಯಾನಬಾರೊ ಲ್ಯೂಕಾಸ್ ವಿಶ್ವದ ಹಿರಿಯರೆನಿಸಿಕೊಂಡಿದ್ದಾರೆ.

ನಾಂದೇಡ್‌ ಸ್ಫೋಟ: ಎಲ್ಲಾ 9 ಆರೋಪಿಗಳು ಖುಲಾಸೆ

ಮುಂಬೈ: 2006ರ ನಾಂದೇಡ್‌ನ ಮನೆಯೊಂದರಲ್ಲಿ ಸಂಭವಿಸಿದ್ದ ಸ್ಫೋಟ ದುರಂತದ 12 ಆರೋಪಿಗಳ ಪೈಕಿ ಬದುಕುಳಿದಿರುವ ಎಲ್ಲ 9 ಆರೋಪಿಗಳನ್ನು ಮುಂಬೈನ ಸೆಷನ್ಸ್‌ ನ್ಯಾಯಾಲಯ ಖುಲಾಸೆಗೊಳಿಸಿದೆ. ಮನೆಯಲ್ಲಿ ನಡೆದಿದ್ದು ಬಾಂಬ್‌ ಸ್ಫೋಟ ಎಂಬುದನ್ನು ಸಾಬೀತುಪಡಿಸಲು ಪೊಲೀಸರು ವಿಫಲವಾಗಿದ್ದಾರೆ ಎಂದು ಕೋರ್ಟ್‌ ಆರೋಪಿಗಳನ್ನು ಖುಲಾಸೆ ಮಾಡಿದೆ. 2006ರ ಏಪ್ರಿಲ್ 4 ಮತ್ತು 5ರ ಮಧ್ಯರಾತ್ರಿಯಲ್ಲಿ ನಾಂದೇಡ್‌ ನಗರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಲಕ್ಷ್ಮಣ್ ಮನೆಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಲಕ್ಷ್ಮಣ್ ಪುತ್ರ ನರೇಶ್‌ ಮತ್ತು ವಿಎಚ್‌ಪಿ ಕಾರ್ಯಕರ್ತ ಹಿಮಾಂಶು ಪಾನ್ಸೆ ಸಾವನ್ನಪ್ಪಿದ್ದರು. ಇನ್ನೊಬ್ಬ ಆರೋಪಿ ವಿಚಾರಣೆ ವೇಳೆ ಮೃತಪಟ್ಟಿದ್ದರು.

ಕಾಶ್ಮೀರದಲ್ಲಿ ಮತ್ತೆ ಸೇನಾ ವಾಹನ ದುರಂತ: 4 ಯೋಧರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನವೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 4 ಯೋಧರು ಮೃತಪಟ್ಟು, 5 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಕಳೆದ ವಾರ ಕೂಡಾ ಇಂಥದ್ದೇ ಘಟನೆಯೊಂದಲ್ಲಿ ಕರ್ನಾಟಕದ ಮೂವರು ಯೋಧರು ಯೋಧರು ಸೇರಿ 5 ಜನರು ಮೃತಪಟ್ಟಿದ್ದರು. ಪ್ರತಿಕೂಲ ಹವಾಮಾನ ಮತ್ತು ಸರಿಯಾಗಿ ಮಾರ್ಗ ಕಾಣದೆ ಹೋಗಿದ್ದರಿಂದಾಗಿ ಈ ದುರಂತ ಸಂಭವಿಸಿದೆ ಎಂದು ಸೇನೆ ಮಾಹಿತಿ ನೀಡಿದೆ.

ರಸ್ತೆ ಹಗರಣ ವರದಿ ಮರು ದಿನ ಪತ್ರಕರ್ತನ ಶವ ಕಂಟ್ರಾಕ್ಟರ್‌ ಮನೇಲಿ ಪತ್ತೆ

ಬಿಜಾಪುರ: ಗುತ್ತಿಗೆದಾರರೊಬ್ಬರ ಭ್ರಷ್ಟಚಾರದ ಕುರಿತು ರಸ್ತೆ ಹಗರಣದ ವರದಿ ಮಾಡಿದ ಮರುದಿನವೇ ಪತ್ರಕರ್ತ ಅದೇ ಕಂಟ್ರ್ಯಾಕ್ಟರ್‌ ಮನೆಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾದ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.32 ವರ್ಷದ ಮುಕೇಶ್‌ ಮೃತ ಪತ್ರಕರ್ತ. ಸ್ಥಳೀಯ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್‌ ಇತ್ತೀಚೆಗೆ ಗುತ್ತಿಗೆದಾರ ಸುರೇಶ್‌ ಚಂದ್ರಶೇಖರ್‌ ಎನ್ನುವವರಿಗೆ ಸಂಬಂಧಿಸಿದ 120 ಕೋಟಿ ರು. ರಸ್ತೆ ಹಗರಣದ ವರದಿಯನ್ನು ಬಯಲಿಗೆಳೆದಿದ್ದರು. ಅವರ ವಿರುದ್ಧದ ತನಿಖೆಗೆ ಸರ್ಕಾರವನ್ನು ಆಗ್ರಹಿಸಿದ್ದರು. 

ಈ ನಡುವೆಯೇ ಸುಕೇಶ್‌ ಸಹೋದರನೊಂದಿಗೆ ಸಭೆಯ ಬಳಿಕ ಜ.1ರಂದು ಮುಕೇಶ್‌ ನಾಪತ್ತೆಯಾಗಿದ್ದರು. ಅದಾಗಿ ಒಂದು ದಿನದ ನಂತರ ಜ.3ರಂದು ಮುಕೇಶ್‌ ಅವರ ಶವ ಚಟ್ಟಣಪಾರದಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಮನೆಯ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಗುತ್ತಿಗೆದಾರ ಸುರೇಶ್‌ ಚಂದ್ರಶೇಖರ್‌ಗಾಗಿ ಶೋಧ ಮುಂದುವರೆಸಿದ್ದಾರೆ.