ಮರಾಠಾ ಒಬಿಸಿ ಮೀಸಲಿಗೆ ಮಹಾ ಸರ್ಕಾರ ಅಸ್ತು

| Published : Jan 28 2024, 01:22 AM IST

ಸಾರಾಂಶ

ಮರಾಠಾ ಹೋರಾಟಗಾರ ಜಾರಂಗೆ ಉಪವಾಸ ಅಂತ್ಯಗೊಳಿಸಿದ್ದಾರೆ. ಕುಣಬಿಗಳಿಗೆ ನೀಡುವ ಒಬಿಸಿ ಸ್ಥಾನಮಾನ ಮರಾಠರಿಗೂ ಲಭ್ಯವಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಭರವಸೆ ನೀಡಿದೆ.

ಮುಂಬೈ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮೀಸಲಿಗೆ ಒತ್ತಾಯಿಸಿ ಕಳೆದೆರಡು ದಿನಗಳಿಂದ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದ ಮರಾಠಾ ಸಮುದಾಯಕ್ಕೆ ಮಹಾರಾಷ್ಟ್ರ ಸರ್ಕಾರ ಮಣಿದಿದ್ದು, ಬೇಡಿಕೆಗಳಿಗೆ ಒಪ್ಪಿಕೊಂಡಿದೆ. ಹೀಗಾಗಿ ಸಮುದಾಯದ ಮುಖಂಡ ಮನೋಜ್‌ ಜಾರಂಗೆ ಪಾಟೀಲ್‌ ಅವರು ಉಪವಾಸ ಸತ್ಯಾಗ್ರಹ ಹಿಂಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಈಗಾಗಲೇ ಕುಣಬಿ ಜನಾಂಗಕ್ಕೆ ಒಬಿಸಿ ಸ್ಥಾನಮಾನವಿದೆ. ಕುಣಬಿಗಳಿಗೂ ಮರಾಠರಿಗೂ ರಕ್ತಸಂಬಂಧ ಇದೆ ಎಂಬ ಐತಿಹ್ಯ ಇದೆ. ಇದನ್ನೇ ಆಧರಿಸಿ ಕುಣಬಿಗಳಿಗೆ ನೀಡುವ ಒಬಿಸಿ ಪ್ರಮಾಣಪತ್ರವನ್ನು ಮರಾಠರಿಗೂ ನೀಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮರಾಠರು ಹಾಗೂ ಕುಣಬಿಗಳು ಮಹಾರಾಷ್ಟ್ರ ಜನಸಂಖ್ಯೆಯಲ್ಲಿ ಶೇ.32ರಷ್ಟು ಪಾಲು ಹೊಂದಿದ್ದಾರೆ.ಜಾರಂಗೆ ನೇತೃತ್ವದಲ್ಲಿ ಮರಾಠ ಸಮುದಾಯ ಮುಂಬೈ ಹೊರವಲಯದಲ್ಲಿ ಕಳೆದೆರಡು ದಿನಗಳಿಂದ ಮರಾಠರು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದರು. ಅಲ್ಲದೆ ಬೇಡಿಕೆ ಈಡೇರಿಸದಿದ್ದರೆ ಮುಂಬೈನ ಆಜಾ಼ದ್‌ ಮೈದಾನದಲ್ಲಿ ದೊಡ್ಡ ಆಂದೋಲನ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಶುಕ್ರವಾರ ರಾತ್ರಿ ಜಾರಂಗೆ ಅವರ ಜೊತೆ ಸಮಾಲೋಚನೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಸತ್ಯಾಗ್ರಹ ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಮರಾಠ ಸಮುದಾಯ ಮುಂಬೈನ ವಾಶಿಯಲ್ಲಿ ವಿಜಯ ಯಾತ್ರೆಯನ್ನು ಕೈಗೊಂಡಿತು. ಮರಾಠ ಸಮುದಾಯವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿತ್ತು. ಜೊತೆಗೆ ಮರಾಠಾ ಸಮುದಾಯದವರಿಗೆ ಕುಣಬಿ ಸಮಾಜಕ್ಕೆ ನೀಡುವ ಒಬಿಸಿ ಜಾತಿ ಪತ್ರಗಳನ್ನು ನೀಡಿ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದರು.