ಮರಾಠ ಮೀಸಲಾತಿ ಹೋರಾಟ ಮತ್ತಷ್ಟು ತೀವ್ರ

| Published : Jan 27 2024, 01:17 AM IST / Updated: Jan 27 2024, 11:19 AM IST

ಸಾರಾಂಶ

ಪ್ರತಿಭಟನಾಕಾರರ ಜತೆ ಮುಂಬೈ ಹೊರವಲಯ ತಲುಪಿದ ಜಾರಂಗೆ, ಮರಾಠರಿಗೆ ಉಚಿತ ಶಿಕ್ಷಣ ಒದಗಿಸದಿದ್ದರೆ ಮುಂಬೈ ಪ್ರವೇಶದ ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಮರಾಠ ಸಮುದಾಯಕ್ಕೆ ಉಚಿತ ಶಿಕ್ಷಣ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ನೇತೃತ್ವದಲ್ಲಿ ಪ್ರತಿಭಟನಾಕಾರರು ಮುಂಬೈ ಹೊರವಲಯದಲ್ಲಿ ಜಮಾಯಿಸಿದ್ದಾರೆ.

ಮರಾಠ ಮೀಸಲಾತಿ ಮತ್ತು ಉಚಿತ ಶಿಕ್ಷಣದ ಬಗ್ಗೆ ಸರ್ಕಾರ ಶೀಘ್ರವಾಗಿ ತೀರ್ಮಾನ ಕೈಗೊಳ್ಳದಿದ್ದರೆ ಮುಂಬೈ ಪ್ರವೇಶಿಸುವುದಾಗಿ ಜಾರಂಗೆ ಎಚ್ಚರಿಕೆ ನೀಡಿದ್ದಾರೆ.

ಒಮ್ಮೆ ಮುಂಬೈ ಪ್ರವೇಶಿಸಿದರೆ ಮತ್ತೆ ಹಿಂದಕ್ಕೆ ಹೆಜ್ಜೆ ಇಡುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರ ತನ್ನ ಉಚಿತ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಬದಲಾವಣೆಯನ್ನು ತರಬೇಕು. 

ಬಾಲಕಿಯರಿಗೆ ನೀಡುತ್ತಿರುವ ಉಚಿತ ಶಿಕ್ಷಣವನ್ನು ಬಾಲಕರಿಗೂ ವಿಸ್ತರಿಸಬೇಕು. ಅಲ್ಲದೇ ಮರಾಠ ಸಮುದಾಯದ ಎಲ್ಲರಿಗೂ ಯುಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಇದೇ ವೇಳೆ ಜಾರಂಗೆ ಅವರನ್ನು ಭೇಟಿ ಮಾಡಿರುವ ಮುಂಬೈ ಪೊಲೀಸ್‌ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಇನ್ನು ಇದೇ ವೇಳೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಡಿಸಿಎಂ ದೇವೆಂದ್ರ ಫಡ್ನವೀಸ್‌ ಹೇಳಿದ್ದರೆ, ಸರ್ಕಾರ ಮರಾಠ ಮೀಸಲಾತಿ ವಿಷಯವನ್ನು ಸುಮ್ಮನೆ ಎಳೆಯುತ್ತಿದೆ ಎಂದು ವಿಪಕ್ಷಗಳು ಟೀಕಿಸಿವೆ.