ವಿಧವೆಯರ ಮರುವಿವಾಹಕ್ಕೆ ಜಾರ್ಖಂಡ್‌ ಸರ್ಕಾರ ಸ್ಕೀಂ

| Published : Mar 08 2024, 01:47 AM IST

ಸಾರಾಂಶ

ವಿಧವೆಯರ ಪುನರ್‌ವಿವಾಹಕ್ಕೆ ಜಾರ್ಖಂಡ್‌ ಸರ್ಕಾರ ಹೊಸ ಪ್ರೋತ್ಸಾಹ ಯೋಜನೆಯನ್ನು ರೂಪಿಸಿದ್ದು ದೇಶದಲ್ಲೇ ಇಂಥ ಕಾರ್ಯಕ್ರಮ ಇದೇ ಮೊದಲಾಗಿದೆ.

ರಾಂಚಿ: ವಿಧವೆಯರ ಮರು ವಿವಾಹಕ್ಕೆ ಪ್ರೋತ್ಸಾಹ ನೀಡಲು ಜಾರ್ಖಂಡ್‌ ಸರ್ಕಾರ ‘ವಿಧವಾ ಪುನರ್‌ವಿವಾಹ ಪ್ರೋತ್ಸಾಹ ಯೋಜನೆ’ಯನ್ನು ಘೋಷಿಸಿದೆ. ಈ ಯೋಜನೆಗೆ ಮುಖ್ಯಮಂತ್ರಿ ಚಂಪೈ ಸೊರೇನ್‌ ಚಾಲನೆ ನೀಡಿದ್ದಾರೆ. ಇದರಡಿ, ಮತ್ತೆ ವಿವಾಹವಾಗುವ ವಿಧವೆಯರಿಗೆ ಸರ್ಕಾರದಿಂದ 2 ಲಕ್ಷ ರು. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇಂತಹ ಯೋಜನೆ ದೇಶದಲ್ಲೇ ಮೊದಲು ಎಂದು ಸರ್ಕಾರ ಹೇಳಿಕೊಂಡಿದೆ.ವಿವಾಹವಾಗಲು ಕನಿಷ್ಠ ವಯಸ್ಸು ದಾಟಿದವರು ಹಾಗೂ ಸರ್ಕಾರಿ ಉದ್ಯೋಗಿ, ಪಿಂಚಣಿದಾರ ಅಥವಾ ಆದಾಯ ತೆರಿಗೆದಾರರಲ್ಲದವರು ಯೋಜನೆಗೆ ಅರ್ಹರಾಗಿರುತ್ತಾರೆ. ಮರುವಿವಾಹವಾದ ಒಂದು ವರ್ಷದೊಳಗೆ ದಿವಂಗತ ಪತಿಯ ಮರಣ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದರೆ 2 ಲಕ್ಷ ರು. ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೀವನ ಸಂಗಾತಿಗಳ ಮರಣಾನಂತರ ಮಹಿಳೆಯರು ಏಕಾಂಗಿಯಾಗುತ್ತಾರೆ. ಆ ಅಸಹಾಯಕ ಮಹಿಳೆಯರು ಹೊಸದಾಗಿ ಜೀವನ ಪ್ರಾರಂಭಿಸಲಿ ಎಂಬ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಮರುವಿವಾಹವಾಗುವ ಎಲ್ಲ ವಿಧವೆಯರಿಗೂ ಪ್ರೋತ್ಸಾಹಧನ ಸಿಗಲಿದೆ.