ಸಾರಾಂಶ
ಅಯೋಧ್ಯೆ: ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೇವಲ ಎರಡು ದಿನ ಬಾಕಿ ಉಳಿದಿರುವ ನಡುವೆಯೇ ಸಾವಿರಾರು ಮುಗ್ಧ ಮುಸ್ಲಿಮರನ್ನು ಕೊಲ್ಲುವ ಮೂಲಕ ಕಟ್ಟಲಾದ ರಾಮಮಂದಿರದ ಮೇಲೆ ದಾಳಿ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವುದಾಗಿ ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆ ಬೆದರಿಕೆ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶುಕ್ರವಾರ ರಾತ್ರಿ ರವಾನೆಯಾದ ಸಂದೇಶದಲ್ಲಿ, ‘ರಾಮಮಂದಿರ ಕಟ್ಟುವ ಉದ್ದೇಶದಿಂದ ಅಮಾಯಕ ಮುಸಲ್ಮಾನರನ್ನು ಕೊಂದು ಕ್ರೌರ್ಯ ಮೆರೆಯಲಾಗಿದೆ.
ಈ ಹಿನ್ನೆಲೆಯಲ್ಲಿ ಜೋರ್ಡಾನ್‌ನಲ್ಲಿರುವ ಆಲ್ ಅಕ್ಸಾ ಮಸೀದಿಯಲ್ಲಿ ಉಂಟಾದ ಕೋಮು ಸಂಘರ್ಷದ ರೀತಿಯಲ್ಲೇ ರಾಮಮಂದಿರದ ಮೇಲೆ ದಾಳಿ ನಡೆಸಿ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಉಲ್ಲೇಖಿಸಲಾಗಿದೆ.
ಅರ್ಥಹೀನ ಸಂದೇಶ- ಗುಪ್ತಚರ ಮೂಲಗಳು: ಆದರೆ ಇದೊಂದು ಅರ್ಥಹೀನ ಸಂದೇಶ. ಜೈಷ್ ಎ ಮೊಹಮ್ಮದ್ ಬೆದರಿಕೆಯಲ್ಲಿ ಯಾವುದೇ ಹುರುಳಿಲ್ಲ. ಜೈಷ್ ಎ ಮೊಹಮ್ಮದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈಗೊಂಬೆಯಾಗಿ ಈ ರೀತಿಯ ಸಂದೇಶ ಕಳುಹಿಸುತ್ತಿದೆ’ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಕಟ್ಟೆಚ್ಚರ:ಆದಾಗ್ಯೂ ಅಯೋಧ್ಯೆಯಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನಗರಾದ್ಯಂತ ಎಲ್ಲ ಚಟುವಟಿಕೆಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜೊತೆಗೆ ಗಣರಾಜ್ಯೋತ್ಸವದ ನಿಮಿತ್ತ ಭಾರತದ ಉದ್ದಗಲಕ್ಕೂ ಈಗಾಗಲೇ ಭಾರೀ ಕಟ್ಟಚ್ಚರ ವಹಿಸಲಾಗಿದೆ.