ಗುಜರಾತ್‌ನ ಮುಂದ್ರಾ ಬಂದರು ಮತ್ತು ದೆಹಲಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವೊಂದನ್ನು ಬೇಧಿಸಿರುವ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು, 228 ಕೆಜಿಯಷ್ಟು ಕ್ಯಾಪ್ಟಗಾನ್‌ (ಜಿಹಾದಿ) ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ನವದೆಹಲಿ: ಗುಜರಾತ್‌ನ ಮುಂದ್ರಾ ಬಂದರು ಮತ್ತು ದೆಹಲಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವೊಂದನ್ನು ಬೇಧಿಸಿರುವ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು, 228 ಕೆಜಿಯಷ್ಟು ಕ್ಯಾಪ್ಟಗಾನ್‌ (ಜಿಹಾದಿ) ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಡ್ರಗ್ಸ್‌ನ ಮೌಲ್ಯ ₹182 ಕೋಟಿಗಳಾಗಿದ್ದು, ಭಾರತದಲ್ಲಿ ಇಂಥ ಮಾದಕ ವಸ್ತು ಪತ್ತೆ ಇದೇ ಮೊದಲು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಅಂತಾರಾಷ್ಟ್ರೀಯ ಜಾಲವೊಂದು ತನ್ನ ಮಾದಕ ವಸ್ತು ಪೂರೈಕೆ ಜಾಲಕ್ಕೆ ಭಾರತವನ್ನು ಕೇಂದ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಜಾಗತಿಕ ಗುಪ್ತಚರ ಸಂಸ್ಥೆಯೊಂದು ಭಾರತದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಿತ್ತು. ಅದನ್ನು ಆಧರಿಸಿ ದೆಹಲಿಯ ನೇಬ್‌ ಸರಾಯ್‌ ಪ್ರದೇಶದಲ್ಲಿನ ಮನೆ ಮೇಲೆ ಅಧಿಕಾರಿಗಳು ಮೇ11ರಂದು ದಾಳಿ ನಡೆಸಿದ್ದರು. ಈ ವೇಳೆ ಸಿರಿಯಾ ಮೂಲದ ವ್ಯಕ್ತಿಯೊಬ್ಬ ಬಾಡಿಗೆಗೆ ಇದ್ದ ಮನೆಯಲ್ಲಿ ಚಪಾತಿ ಕಟ್‌ ಮಿಷನ್‌ನಲ್ಲಿ 31.5 ಕೆಜಿಯಷ್ಟು ಕ್ಯಾಪ್ಟಗಾನ್‌ ಡ್ರಗ್ಸ್‌ ಪತ್ತೆಯಾಗಿತ್ತು. ಆತ ನೀಡಿದ ಸುಳಿವಿನ ಮೇರೆಗೆ ಮೇ 14ರಂದು ಗುಜರಾತ್‌ನ ಮುಂದ್ರಾ ಬಂದರಿನ ಮೇಲೆ ದಾಳಿ ನಡೆಸಿದಾಗ ಸಿರಿಯಾದಿಂದ ಆಗಮಿಸಿದ್ದ ಮತ್ತು ಸೌದಿ ಅರೇಬಿಯಾಕ್ಕೆ ಸಾಗಿಸಲು ಅಣಿಮಾಡಿ ಇಟ್ಟಿದ್ದ ಕಂಟೇನರ್‌ನಲ್ಲಿ ಮತ್ತೆ 196.2 ಕೆಜಿಯಷ್ಟು ಕ್ಯಾಪ್ಟಗಾನ್‌ ಪತ್ತೆಯಾಗಿದೆ.

ಪ್ರಕರಣ ಸಂಬಂಧ ಓರ್ವ ಸಿರಿಯಾ ಪ್ರಜೆ ಮತ್ತು 228 ಕೆಜಿ ಮಾತ್ರೆ ಮತ್ತು ಪುಡಿಯ ಸ್ವರೂಪದಲ್ಲಿದ್ದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಹಾದಿ ಡ್ರಗ್ ಎಂದರೇನು?:

ಇದೊಂದು ಸಿಂಥೆಟಿಕ್‌ ಡ್ರಗ್‌. 1960ರಲ್ಲಿ ಮೊದಲ ಬಾರಿಗೆ ಉತ್ಪಾದಿಸಲಾಗಿತ್ತು. ಇದನ್ನು ಸೇವಿಸಿದರೆ ಸುದೀರ್ಘ ಅವಧಿಗೆ ನಿದ್ದೆ ತಡೆಯಬಹುದು. ಆಯಾಸ ಮತ್ತು ಮನಸ್ಸಿನ ಆತಂಕ, ಭೀತಿ ದೂರ ಮಾಡುತ್ತದೆ. ಆಕ್ರಮಣಶೀಲತೆ ಹೆಚ್ಚಿಸುತ್ತದೆ. ಅಪಾಯ ಎದುರಿಸುವ ಮನಸ್ಥಿತಿ ಹೆಚ್ಚಿಸುತ್ತದೆ. ಅತ್ಯಂತ ಸಂಕಷ್ಟದ ಸ್ಥಿತಿಯಲ್ಲೂ ಹೋರಾಟದ ಮನೋಭಾವ ಕಾಪಾಡುತ್ತದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಇದನ್ನು ಯುದ್ಧ, ಸಂಘರ್ಷದ ವೇಳೆ ಉಗ್ರರು ಬಳಸುತ್ತಿದ್ದಾರೆ. ಈ ಮೂಲಕ ಯುದ್ಧಭೂಮಿಯಲ್ಲಿ ಯಾವುದೇ ಅಳುಕಿಲ್ಲದೇ, ನಿದ್ದೆ ಬಿಟ್ಟು ಹೋರಾಡುವ ಕೆಲಸ ಮಾಡುತ್ತಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಇದರ ಬಳಕೆ ಹೆಚ್ಚಿದೆ. ಐಸಿಸ್‌ ಸೇರಿದಂತೆ ಕೆಲ ಉಗ್ರ ಸಂಘಟನೆಗಳು ಇದರ ಬಳಕೆ ತೀವ್ರ ಮಾಡಿದ ಬಳಿಕ ಇದಕ್ಕೆ ಜಿಹಾದಿ ಡ್ರಗ್‌ ಎಂಬ ಹೆಸರು ಬಂದಿದೆ. ಇದರೆ ಡ್ರಗ್ಸ್‌ಗೆ ಹೋಲಿಸಿದರೆ ಇದರ ಬೆಲೆ ಕಡಿಮೆ. ಹೀಗಾಗಿ ಬಡವರ ಡ್ರಗ್ಸ್‌ ಎಂಬ ಉಪನಾಮವೂ ಇದಕ್ಕಿದೆ.

ಏನಿದು ಜಿಹಾದಿ ಡ್ರಗ್ಸ್?

- ಇದೊಂದು ಅಪಾಯಕಾರಿ ಸಿಂಥೆಟಿಕ್‌ ಡ್ರಗ್‌. 1960ರಲ್ಲಿ ಮೊದಲ ಬಾರಿಗೆ ಉತ್ಪಾದನೆ,

- ಸೇವಿಸಿದರೆ ಸುದೀರ್ಘ ಅವಧಿಗೆ ನಿದ್ದೆ ತಡೆಯಬಹುದು. ಆಯಾಸ, ಆತಂಕ ಉಂಟಾಗದು

- ಆಕ್ರಮಣಶೀಲತೆ, ಹೋರಾಟದ ಮನೋಭಾವ, ಅಪಾಯ ಎದುರಿಸುವ ಮನಸ್ಥಿತಿ ಸೃಷ್ಟಿ

- ಹೀಗಾಗಿ ಉಗ್ರರು ಇದನ್ನು ಹೆಚ್ಚು ಬಳಸುತ್ತಾರೆ. ದೀರ್ಘಕಾಲದವರೆಗೆ ಹೋರಾಡುತ್ತಾರೆ

- ಐಸಿಸ್‌, ಇತರ ಉಗ್ರರು ಹೆಚ್ಚು ಬಳಸುತ್ತಿದ್ದ ಕಾರಣ ಇದಕ್ಕೆ ಜಿಹಾದಿ ಡ್ರಗ್ಸ್ ಎಂದು ಹೆಸರು

ಡ್ರಗ್ಸ್‌ ಮುಕ್ತ ದೇಶಕ್ಕೆ ಪಣ

ಮೋದಿ ಸರ್ಕಾರ ಡ್ರಗ್ಸ್‌ ಮುಕ್ತ ಭಾರತ ನಿರ್ಮಾಣಕ್ಕೆ ಬದ್ಧ. ಆಪರೇಷನ್‌ ರೇಜ್‌ಪಿಲ್‌ ಮೂಲಕ 182 ಕೋಟಿ ರು. ಮೌಲ್ಯದ ಜಿಹಾದಿ ಡ್ರಗ್ಸ್‌ ಎಂದು ಕರೆಯಲಾಗುವ ಕ್ಯಾಪ್ಟಗಾನ್‌ ವಶಪಡಿಸಿಕೊಂಡಿಸಿವೆ. ಇಂಥ ಮಾದಕ ವಸ್ತು ಪತ್ತೆ ಇದೇ ಮೊದಲು.

- ಅಮಿತ್‌ ಶಾ, ಕೇಂದ್ರ ಸಚಿವ