ಜಮ್ಮು ಮತ್ತು ಕಾಶ್ಮೀರ ಚುನಾವಣೆ : ಎನ್‌ಸಿ ಮತ್ತು ಪಿಡಿಪಿ ಮೈತ್ರಿಗೆ ಕಾಂಗ್ರೆಸ್‌ ಜೊತೆ ಮಾತುಕತೆ

| Published : Aug 20 2024, 12:46 AM IST / Updated: Aug 20 2024, 05:08 AM IST

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಸಿ ಮತ್ತು ಪಿಡಿಪಿ ಪಕ್ಷಗಳು ಕಾಂಗ್ರೆಸ್‌ ಜೊತೆ ಮೈತ್ರಿ ಮಾತುಕತೆ ಆರಂಭಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಪ್ರಾದೇಶಿಕ ಪಕ್ಷಗಳು ಇಂಡಿಯಾ ಕೂಟದ ಭಾಗವಾದರೆ ಯಶಸ್ಸು ನಿಶ್ಚಿತ ಎಂದಿದ್ದಾರೆ.

ಶ್ರೀನಗರ: ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಪೀಪಲ್ಸ್‌ ಡೆಮಾಕ್ರೆಟಿಕ್ ಪಕ್ಷಗಳು (ಪಿಡಿಪಿ) ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾತುಕತೆ ಆರಂಭಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ, ‘ನನಗೆ ತಿಳಿದಿರುವ ಪ್ರಕಾರ ಎನ್‌ಸಿ ಈಗಾಗಲೇ ನಮ್ಮ ಕೇಂದ್ರ ನಾಯಕರ ಜೊತೆ ಮಾತುಕತೆ ನಡೆಸಿದೆ. ಪಿಡಿಪಿ ಕೂಡಾ ಇಂಥ ಪ್ರಯತ್ನದಲ್ಲಿದೆ. ಪ್ರಾದೇಶಿಕ ಪಕ್ಷಗಳು ಒಂದು ವೇಳೆ ಇಂಡಿಯಾ ಕೂಟದ ಭಾಗವಾದರೆ, ಕಾಂಗ್ರೆಸ್‌ ಖಂಡಿತವಾಗಿ ಯಶಸ್ವಿಯಾಗುತ್ತದೆ’ ಎಂದರು.

==

ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಮೌಲ್ಯಮಾಪನ: ಕೇಂದ್ರ ಸರ್ಕಾರ ಯೋಜನೆ

ನವದೆಹಲಿ: ಶಾಸಕರು ಮತ್ತು ಸಂಸದರ ವಿರುದ್ಧ ದಾಖಲದ ಪ್ರಕರಣಗಳ ತ್ವರಿತ ವಿಚಾರಣೆಗೆಂದು ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳ ಕಾರ್ಯಕ್ಷಮತೆ ತಿಳಿಯಲು ಸಮಗ್ರ ಮೌಲ್ಯಮಾಪನಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಕೇಂದ್ರ ಕಾನೂನು ಸಚಿವಾಲಯವು, ಐಐಎಂ, ಐಐಟಿ, ಕಾನೂನು ವಿಶ್ವವಿದ್ಯಾಲಯಗಳು, ನ್ಯಾಯಾಂಗ ಅಕಾಡೆಮಿಗಳಿಂದ ಪ್ರಸ್ತಾಪ ಆಹ್ವಾನಿಸಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಕೇಂದ್ರ ಸರ್ಕಾರ 2017ರಲ್ಲಿ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಲಿ ಒಟ್ಟು 12 ವಿಶೇಷ ನ್ಯಾಯಾಲಯ ಸ್ಥಾಪಿಸಿತ್ತು. ಕಾನೂನು ಇಲಾಖೆಯ ಪ್ರಸ್ತಾವನೆಯ ಪ್ರಕಾರ ವಿಶೇಷ ನ್ಯಾಯಾಲಯಗಳ ಕಾರ್ಯಕ್ಷಮತೆ, ಫಲಪ್ರದತೆ ಹಾಗೂ ಅದರ ಪರಿಣಾಮವನ್ನು ಕೂಲಂಕಶವಾಗಿ ಅಧ್ಯಯನ ನಡೆಸಬೇಕಿದೆ.

==

370 ವಿಧಿ ಪುನಃಸ್ಥಾಪನೆ, ಪೂರ್ಣ ಸ್ವಾಯತ್ತೆ ಸೇರಿ ಎನ್‌ಸಿ 12 ಭರವಸೆ ಪ್ರಕಟ

ಶ್ರೀನಗರ: ಮುಂಬರುವ ವಿಧಾನಸಭೆ ಚುನಾವಣೆ ಸಂಬಂಧ ಫಾರುಖ್‌ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ 12 ಭರವಸೆ ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ, 2019ರಲ್ಲಿ ರದ್ದಾದ 370ನೇ ವಿಧಿ ಮರುಜಾರಿ, ರಾಜ್ಯಕ್ಕೆ ಪೂರ್ಣ ಸ್ವಾಯತ್ತೆ, ರಾಜಕೀಯ ಕೈದಿಗಳ ಬಿಡುಗಡೆ, ರಾಜ್ಯದಲ್ಲಿ ಜಾರಿಯಲ್ಲಿರುವ 1978ರ ಸಾರ್ವಜನಿಕ ಭದ್ರತಾ ಕಾಯ್ದೆ ರದ್ದು, ಕಾಶ್ಮೀರಿ ಪಂಡಿತರ ಗೌರವಪೂರ್ವ ವಾಪಸ್‌ಗೆ ಕ್ರಮ, ಪಾಸ್ಪೋರ್ಟ್‌ ಪರಿಶೀಲನೆ ಪ್ರಕ್ರಿಯೆ ಸರಳ, ನ್ಯಾಯಸಮ್ಮತವಲ್ಲದ ಅಧಿಕಾರಿಗಳ ವಜಾ ರದ್ದು, ಹೆದ್ದಾರಿಗಳಲ್ಲಿ ತಪಾಸಣೆ ಹೆಸರಲ್ಲಿ ನಡೆಯುವ ಕಿರಿಕಿರಿಗೆ ಬ್ರೇಕ್‌, 1ಲಕ್ಷ ಉದ್ಯೋಗ ಸೃಷ್ಟಿ, ಆರ್ಥಿಕವಾಗಿ ಹಿಂದುಳಿದವರಿಗೆ ವಾರ್ಷಿಕ 6 ಉಚಿತ ಎಲ್‌ಪಿಜಿ, ಅಲ್ಪಸಂಖ್ಯಾತ ಆಯೋಗ ರಚನೆ ಸೇರಿದೆ. ಜಮ್ಮು-ಕಾಶ್ಮೀರದಲ್ಲಿ ಸೆ.18, 25 ಹಾಗೂ ಅ.1ರಂದು ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

==

ಪಾಕ್‌: 4ನೇ ಮಂಕಿಪಾಕ್ಸ್‌ ಪ್ರಕರಣ ದೃಢ

ಇಸ್ಲಾಮಾಬಾದ್‌: ನೆರೆಯ ಪಾಕಿಸ್ತಾನದಲ್ಲಿ ಮತ್ತೊಂದು ಮಂಕಿಪಾಕ್ಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಕಳೆದ 3 ದಿನದಲ್ಲಿ ಪತ್ತೆಯಾದ ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿದೆ.ಇತ್ತೀಚೆಗೆ ಸೌದಿ ಅರೇಬಿಯಾದಿಂದ ಆಗಮಿಸಿದ್ದ ಪಾಕ್‌ ಆಕ್ರಮಿತ ಕಾಶ್ಮೀರದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ದೃಢಪಟ್ಟಿದೆ. ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದರು.

ಇದಕ್ಕೂ ಮುನ್ನ ಆಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಖೈಬರ್‌ ಪಖ್ತೂನ್‌ ಖ್ವಾಹ್‌ ಪ್ರದೇಶಕ್ಕೆ ಕೊಲ್ಲಿ ದೇಶದಿಂದ ಆಗಮಿಸಿದ್ದ ಮೂವರು ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿತ್ತು. ಇದು ಏಷ್ಯಾಖಂಡದಲ್ಲಿ ಈ ವರ್ಷ ದಾಖಲಾದ ಮೊದಲ ಪ್ರಕರಣವಾಗಿತ್ತು.ಮಂಕಿಪಾಕ್ಸ್‌ ಈ ವರ್ಷ ಆಫ್ರಿಕಾ ದೇಶಗಳಲ್ಲಿ ತೀವ್ರವಾಗಿ ಹಬ್ಬಿದ್ದು, 14000ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟು 500ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ.

==

ಕಾಶ್ಮೀರ ಉಗ್ರ ದಾಳಿಗೆ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್ ಸಾವು

ಜಮ್ಮು: ಜಮ್ಮು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಸೋಮವಾರ ಗಸ್ತು ಪಡೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಒಬ್ಬ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ. ಜಮ್ಮುವಿನ ಬಸಂತ್‌ಗಢದ ದುಡು ಪ್ರದೇಶದಲ್ಲಿ ಸಿಆರ್‌ಪಿಎಫ್‌ ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.ಈ ವೇಳೆ 187ನೇ ಬೆಟಾಲಿಯನ್‌ಗೆ ಸೇರಿದ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್‌ ಕುಲ್‌ದೀಪ್‌ಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಭಯೋತ್ಪಾದಕರು ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.