ವಕ್ಫ್‌ ತಿದ್ದುಪಡಿ ಕರಡು ಮಸೂದೆ : ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯಲ್ಲಿ ಅಂಗೀಕಾರ

| N/A | Published : Jan 30 2025, 12:32 AM IST / Updated: Jan 30 2025, 05:33 AM IST

ಸಾರಾಂಶ

ವಕ್ಫ್‌ ತಿದ್ದುಪಡಿ ಮಸೂದೆ ಪರಿಶೀಲನೆಗೆಂದು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ ಬುಧವಾರ ತಿದ್ದುಪಡಿ ಮಾಡಲಾದ ಕರಡು ಮಸೂದೆಯನ್ನು ಅಂಗೀಕರಿಸಿದೆ.

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆ ಪರಿಶೀಲನೆಗೆಂದು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ   ಬುಧವಾರ ತಿದ್ದುಪಡಿ ಮಾಡಲಾದ ಕರಡು ಮಸೂದೆಯನ್ನು ಅಂಗೀಕರಿಸಿದೆ.

ಬುಧವಾರ ಇಲ್ಲಿ ನಡೆದ ಜೆಪಿಸಿ ಸಭೆಯಲ್ಲಿ ಬಹುಮತದ ಮೂಲಕ ಮಸೂದೆ ಅಂಗೀಕರಿಸಲಾಗಿದೆ. ಮಸೂದೆಯನ್ನು ಗುರುವಾರ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುವುದು. ಬಳಿಕ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುವ ಸಾಧ್ಯತೆಯಿದೆ. 15-11 ಮತಗಳ ಅಂತರದಲ್ಲಿ ಅಂಗೀಕರಿಸಲಾದ ಈ ಮಸೂದೆಯನ್ನು ವಿಪಕ್ಷದ ಸದಸ್ಯರು ‘ಅಸಾಂವಿಧಾನಿಕ’ ಎಂದು ಕರೆದಿದ್ದು, ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅನುವು ಮಾಡಿಕೊಡುವ ಮೂಲಕ ವಕ್ಫ್‌ ಸಮಿತಿಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌, ‘ವಿಪಕ್ಷದವರ ಸಲಹೆಗಳನ್ನು ಪರಿಗಣಿಸಿಯೇ ತಿದ್ದುಪಡಿ ತರಲಾಗಿದ್ದು, ವಕ್ಫ್‌ ಬೋರ್ಡ್‌ ತನ್ನ ಕರ್ತವ್ಯಗಳನ್ನು ಪಾರದರ್ಶಕವಾಗಿ ನಿರ್ವಹಿಸಲು ಇದು ಸಹಕಾರಿಯಾಗಲಿದೆ. ಮೊದಲ ಬಾರಿಗೆ ಪಾಸ್ಮಾಂದಾ ಮುಸ್ಲಿಮರು, ಬಡವರು, ಮಹಿಳೆಯರು ಹಾಗೂ ಅನಾಥರನ್ನು ವಕ್ಫ್‌ ಅಡಿ ತರಲಾಗಿದೆ’ ಎಂದರು.

ಭಾರತದಲ್ಲಿ ವಕ್ಫ್‌ ಆಸ್ತಿಗಳನ್ನು ನಿರ್ವಹಿಸಿ ನಿಯಂತ್ರಿಸುವ 1995ರ ಕಾಯ್ದೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ತರಲು 2024ರ ಆ.8ರಂದು ಜಂಟಿ ಸಮಿತಿಯನ್ನು ರಚಿಸಲಾಗಿದೆ.