ಸಾರಾಂಶ
ನವದೆಹಲಿ: ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠದ ಜಡ್ಜ್‌ಗಳ ನಡುವೆ ಆರಂಭವಾಗಿದ್ದ ಅಪರೂಪದ ಸಮರಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಒತ್ತಿದೆ.
ಎರಡೂ ಪೀಠಗಳ ಎದುರು ನಡೆಯುತ್ತಿದ್ದ ಎಲ್ಲ ವಿಚಾರಣೆಗಳನ್ನೂ ನಿಲ್ಲಿಸುವಂತೆ ತಾಕೀತು ಮಾಡುವ ಮೂಲಕ, ಇಬ್ಬರು ಜಡ್ಜ್‌ಗಳ ಕಾದಾಟವನ್ನು ತಡೆದಿದೆ.
ಈ ಕುರಿತು ಸೋಮವಾರ ಮುಂದಿನ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಪೀಠ ಹೇಳಿದೆ.
ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಅಕ್ರಮವಾಗಿ ನಕಲಿ ಜಾತಿ ಪ್ರಮಾಣಪತ್ರ ವಿತರಿಸಲಾಗಿದೆ ಎಂಬ ಆರೋಪ ಸಂಬಂಧ ನ್ಯಾ। ಅಭಿಜಿತ್ ಗಂಗೋಪಾಧ್ಯಾಯ ನೇತೃತ್ವದ ಏಕಸದಸ್ಯ ಪೀಠಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು.
ಅದರ ವಿಚಾರಣೆ ನಡೆಸಿದ್ದ ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆಗೆ ಕಳೆದ ವಾರ ಆದೇಶಿಸಿದ್ದರು. ಇದರ ವಿರುದ್ಧ ತೃಣಮೂಲ ಕಾಂಗ್ರೆಸ್ ಸರ್ಕಾರ ವಿಭಾಗೀಯ ಪೀಠದ ಕದ ಬಡಿದಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ। ಸೌಮೇನ್ ಸೇನ್ ಅವರಿದ್ದ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದರು.ಇದರಿಂದ ಕ್ರುದ್ಧರಾದ ನ್ಯಾ। ಗಂಗೋಪಾಧ್ಯಾಯ ಅವರು, ‘ನ್ಯಾ। ಸೇನ್ ಅವರು ಪಶ್ಚಿಮ ಬಂಗಾಳದ ರಾಜಕೀಯ ಪಕ್ಷವೊಂದನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ.
ಹೀಗಾಗಿ ವಿಭಾಗೀಯ ಪೀಠದ ತಡೆ ಇದ್ದರೂ ಸಿಬಿಐ ತನಿಖೆ ಮುಂದುವರಿಯಬೇಕು. ನನ್ನ ಆದೇಶವನ್ನು ಸುಪ್ರೀಂಕೋರ್ಟ್‌ಗೆ ಕಳುಹಿಸಬೇಕು.
ನ್ಯಾ। ಸೇನ್ ಹೊರಡಿಸಿರುವ ಆದೇಶಗಳ ಬಗ್ಗೆ ಸುಪ್ರೀಂಕೋರ್ಟ್ ಗಮನಹರಿಸಬೇಕು’ ಎಂದು ಮತ್ತೊಂದು ‘ಆದೇಶ’ ಹೊರಡಿಸಿದ್ದರು. ಇದು ಭಾರಿ ಬಿಕ್ಕಟ್ಟಿಗೆ ಕಾರಣವಾಗಿತ್ತು.