ಆಪ್‌ ನಾಯಕರಿಗೆ ಕವಿತಾ 100 ಕೋಟಿ ರು. ಲಂಚ: ಇ.ಡಿ.

| Published : Jun 04 2024, 12:31 AM IST / Updated: Jun 04 2024, 07:48 AM IST

ಸಾರಾಂಶ

ಆಮ್‌ಆದ್ಮಿ ಪಕ್ಷದ ನಾಯಕರಿಗೆ, ತೆಲಂಗಾಣದ ಬಿಆರ್‌ಎಸ್‌ ಪಕ್ಷದ ನಾಯಕಿ ಕೆ.ಕವಿತಾ 100 ಕೋಟಿ ರು. ಲಂಚ ನೀಡಿದ್ದರು. ಹೀಗೆ ನೀಡಿದ ಲಂಚಕ್ಕೆ ಪ್ರತಿಯಾಗಿ ತಮಗೆ ಬೇಕಾದ ಮದ್ಯ ಕಂಪನಿಗಳ ಮೂಲಕ 192 ಕೋಟಿ ರು. ಅಕ್ರಮ ಲಾಭ ಪಡೆದುಕೊಂಡಿದ್ದಾರೆ. 

ನವದೆಹಲಿ: ದೆಹಲಿಯಲ್ಲಿ ಮದ್ಯದ ಅಂಗಡಿ ಲೈಸೆನ್ಸ್‌ ಅನ್ನು ತಮಗೆ ಬೇಕಾದ ಕಂಪನಿಗಳಿಗೆ ಕೊಡಿಸಲು ಆಡಳಿತಾರೂಢ ಆಮ್‌ಆದ್ಮಿ ಪಕ್ಷದ ನಾಯಕರಿಗೆ, ತೆಲಂಗಾಣದ ಬಿಆರ್‌ಎಸ್‌ ಪಕ್ಷದ ನಾಯಕಿ ಕೆ.ಕವಿತಾ 100 ಕೋಟಿ ರು. ಲಂಚ ನೀಡಿದ್ದರು. ಹೀಗೆ ನೀಡಿದ ಲಂಚಕ್ಕೆ ಪ್ರತಿಯಾಗಿ ತಮಗೆ ಬೇಕಾದ ಮದ್ಯ ಕಂಪನಿಗಳ ಮೂಲಕ 192 ಕೋಟಿ ರು. ಅಕ್ರಮ ಲಾಭ ಪಡೆದುಕೊಂಡಿದ್ದಾರೆ. 

ಒಟ್ಟಾರೆ 1,100 ಕೋಟಿ ರು. ಮೊತ್ತದ ಹಣ ಬಳಿಕ ಅಕ್ರಮವಾಗಿ ವರ್ಗ ಈ ವಹಿವಾಟಿನಲ್ಲಿ ನಡೆದಿದೆ ಎಂದು ಎಂದು ಜಾರಿ ನಿರ್ದೇಶನಾಲಯ ಕೋರ್ಟ್‌ಗೆ ಮಾಹಿತಿ ನೀಡಿದೆ.ಕವಿತಾ ಅವರು, ಇತರೆ ಕೆಲವರ (ಸೌತ್‌ಗ್ರೂಪ್‌) ಜೊತೆಗೂಡಿ ಇಂಡೋಸ್ಪಿರಿಟ್‌ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಆಪ್‌ ನಾಯಕರಿಗೆ 100 ಕೋಟಿ ರು. ಲಂಚದ ಹಣ ಪಾವತಿಸಿದ್ದಾರೆ. ಈ ಸಂಸ್ಥೆ ನಿಜವಾದ ಉದ್ಯಮ ಸಂಸ್ಥೆ ಎಂದು ಬಿಂಬಿಸಿದ್ದಾರೆ. ಇದರಿಂದ ಮದ್ಯದ ಲೈಸೆನ್ಸ್‌ ರದ್ದಾಗುವವರೆಗೆ ಮದ್ಯದ ಉದ್ಯಮಿಗಳಿಗೆ 192 ಕೋಟಿ ರು. ಲಾಭವಾಗಿದೆ. ಹೀಗಾಗಿ ಇಡೀ ಅಕ್ರಮದಿಂದ 292 ಕೋಟಿ ರು. ವಹಿವಾಟು ನಡೆದಂತಾಗಿದೆ. ಬಳಿಕ 1,100 ಕೋಟಿ ರು. ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಇ.ಡಿ ಆರೋಪಿಸಿದೆ.

ಮೊಬೈಲ್‌ನಲ್ಲಿನ ಮಾಹಿತಿ ನಾಶ:ಇದೇ ವೇಳೆ ತನಿಖೆ ವೇಳೆ ಕವಿತಾ ತಮ್ಮ 9 ಮೊಬೈಲ್‌ಗಳನ್ನು ಒಪ್ಪಿಸಿದ್ದರು. ಆದರೆ ಅದರಲ್ಲಿನ ಎಲ್ಲಾ ಮಾಹಿತಿಗಳನ್ನೂ ಅಳಿಸಿಹಾಕುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾರೆ.

 ತನಿಖೆ ವೇಳೆ ಇದಕ್ಕೆ ಸೂಕ್ತ ಕಾರಣ ನೀಡಲೂ ಅವರು ವಿಫಲರಾಗಿದ್ದಾರೆ ಎಂದು ಇ.ಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಅಲ್ಲದೆ, ಅವರು ದಿನಕ್ಕೆ 10 ಲಕ್ಷ ರು. ಬಾಡಿಗೆ ಇರುವ ದಿಲ್ಲಿ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದರು ಎಂದೂ ಹೇಳಿದೆ.ಈ ನಡುವೆ ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಜು.3ರವರೆಗೂ ವಿಸ್ತರಣೆ ಮಾಡಿ ಸೋಮವಾರ ಆದೇಶಿಸಿದೆ.

ಸುಪ್ರೀಂನಲ್ಲಿ ಸಿಸೋಡಿಯಾ ಜಾಮೀನು ಭವಿಷ್ಯ

ನವದೆಹಲಿ: ಅಬಕಾರಿ ಹಗರಣದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಲಿದೆ.ತಮ್ಮ ವಿರುದ್ಧ ಇ..ಡಿ ಮತ್ತು ಸಿಬಿಐ ಹಾಕಿರುವ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಸೋಡಿಯಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ದ್ವಿಸದಸ್ಯ ಪೀಠ ಇದರ ವಿಚಾರಣೆ ನಡೆಸಲಿದೆ.ಸಿಸೋಡಿಯಾ ಅವರನ್ನು ಸಿಬಿಐ ಅಬಕಾರಿ ಹಗರಣ ಮತ್ತು ಭ್ರಷ್ಟಚಾರದ ಆರೋಪದಡಿಯಲ್ಲಿ ಕಳೆದ ವರ್ಷ ಫೆ.26ರಂದು ಬಂಧಿಸಿತ್ತು. 2023 ಮಾರ್ಚ್‌ 09ರಂದು ಅವರ ಮೇಲೆ ಎಫ್ಐಆರ್ ದಾಖಲಿಸಿತ್ತು. ಅಂದಿನಿಂದ ಆಪ್ ನಾಯಕ ಬಂಧನದಲ್ಲಿಯೇ ಇದ್ದಾರೆ. ಬಳಿಕ ಅವರನ್ನು ಇ.ಡಿ. ಕೂಡ ಬಂಧಿಸಿತ್ತು