ಸಾರಾಂಶ
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧರಿತ ‘ಎಮರ್ಜೆನ್ಸಿ’ ಚಿತ್ರ ವೀಕ್ಷಣೆಗೆ ಬನ್ನಿ ಎಂದು ಸಂಸದೆ ಪ್ರಿಯಾಂಕಾ ಗಾಂಧಿಗೆ, ಚಿತ್ರದ ನಾಯಕಿ, ನಿರ್ದೇಶಕಿ ಕಂಗನಾ ರಾಣಾವತ್ ಆಹ್ವಾನ ನೀಡಿದ್ದಾರೆ. ಜ.17ರಂದು ಬಿಡುಗಡೆಯಾಗಲಿರುವ ಚಿತ್ರ ವೀಕ್ಷಿಸಲು ಬನ್ನಿ ಎಂದು ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇನೆ. ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ನಟಿ ಹೇಳಿದ್ದಾರೆ.
ಮುಂಬೈ, ಗುಜರಾತಿನಲ್ಲಿ ತಲಾ ಒಂದು ಎಚ್‌ಎಂಪಿವಿ ಸೋಂಕು ಪತ್ತೆ
ಮುಂಬೈ: ಬುಧವಾರ ಎಚ್‌ಎಂಪಿವಿ ವೈರಸ್ ಸೋಂಕಿನ 2 ಪ್ರಕರಣಗಳು ದಾಖಲಾಗಿದೆ. ಮುಂಬೈ ಮತ್ತು ಗುಜರಾತಿನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 9ಕ್ಕೇರಿಕೆಯಾಗಿದೆ.ಕಳೆದ ವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಾದ ಮಗುವಿನಲ್ಲಿ 6 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ, ಮಹಾರಾಷ್ಟ್ರದಲ್ಲಿ ಇದುವರೆಗೆ ದಾಖಲಾದ ಮೂರನೇ ಪ್ರಕರಣವಾಗಿದೆ. ಗುಜರಾತಿನ ಸಬರ್‌ಕಾಂತ್ ಜಿಲ್ಲೆಯಲ್ಲಿ ನ್ಯೂಮೋನಿಯಾದಿಂದ ಬಳಲುತ್ತಿದ್ದ 8 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ ಗುಜರಾತಿನಲ್ಲಿ 2 ಪ್ರಕರಣ ದಾಖಲಾಗಿದೆ. ಜ.6ರಂದು ಬೆಂಗಳೂರಿನಲ್ಲಿ ಭಾರತದ ಮೊದಲ ಎಚ್‌ಎಂಪಿವಿ ಪ್ರಕರಣ ಪತ್ತೆಯಾಗಿತ್ತು.
ರಸ್ತೆ ಬದಿ ನಿಂತಿದ್ದ ವ್ಯಕ್ತಿ ಗಾಳಿಯಲ್ಲಿ ಚೆಂಡಾಡಿದ ಮದವೇರಿದ್ದ ಸಾಕಾನೆ
ಮಲಪ್ಪುರಂ: ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕಾನೆಯೊಂದು, ಮದವೇರಿದ ಕಾರಣ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬನ್ನು ಗಾಳಿಯಲ್ಲಿ ಚೆಂಡಾಡಿದ ಹಾಗೂ 24 ಜನರ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಆನೆ ದಾಳಿಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲಪ್ಪುರಂ ಜಿಲ್ಲೆಯ ಬಿಪಿ ಅಂಗಡಿ ಮಸೀದಿಯಲ್ಲಿ ಪುಥಿಯಂಗಡಿ ಆಚರಣೆಗೆಂದು 5 ಆನೆಗಳನ್ನು ಕರೆತರಲಾಗಿತ್ತು. ಇದರಲ್ಲಿ ಪಕ್ಕಟ್ಟು ಶ್ರೀಕುಟ್ಟಣ್ ಎಂಬ ಆನೆ ಇದ್ದಕ್ಕಿದ್ದಂತೆ ನೆರೆದಿದ್ದವರ ಮಧ್ಯೆ ನುಗ್ಗಿ ತನ್ನ ಸೊಂಡಿಲಿನಿಂದ ಓರ್ವನನ್ನು ಎಳೆದಾಡಿ, ಗಾಳಿಯಲ್ಲಿ ತೂರಿಸಿ ಬಿಸಾಡಿದೆ. ಈ ವೇಳೆ ಅಲ್ಲಿದ್ದ ಜನರ ಪೈಕಿ 24 ಜನರಿಗೆ ಗಾಯಗಳಾಗಿವೆ. ದಾಳಿಗೊಳಗಾದವ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಯೋಜಿನಿಕ್ ತಂತ್ರಜ್ಞ ನಿಪುಣ ನಾರಾಯಣನ್ ಇಸ್ರೋ ಹೊಸ ಮುಖ್ಯಸ್ಥ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂದಿನ ಅಧ್ಯಕ್ಷರಾಗಿ ಡಾ। ವಿ. ನಾರಾಯಣನ್ ಅವರನ್ನು ನೇಮಿಸಲಾಗಿದೆ. ಅವರು ಜ.14 ರಂದು ಪ್ರಸ್ತುತ ಇಸ್ರೋ ಮುಖ್ಯಸ್ಥರಾಗಿರುವ ಎಸ್ ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಮೂಲದವರಾದ ನಾರಾಯಣನ್, ಐಐಟಿ ಖರಗ್‌ಪುರದಲ್ಲಿ ಕ್ರಯೋಜಿನಿಕ್ ತಂತ್ರಜ್ಞಾನದ ಎಂಟೆಕ್ ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. 1984ರಲ್ಲಿ ಇಸ್ರೋಗೆ ಸೇರಿದ ನಾರಾಯಣನ್ ಅವರು, ಪಿಎಸ್‌ಎಲ್‌ವಿ, ಎಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಕೆಟ್ ಉಡಾವಣೆಗೆ ಪ್ರಮುಖ ಇಂಧನ ತಂತ್ರಜ್ಞಾನ ಕ್ರಯೋಜಿನಿಕ್ ತಂತ್ರಜ್ಞಾನದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಪ್ರಶಾಂತ್ ಕಿಶೋಶ್ ಆರೋಗ್ಯ ಗಂಭೀರ
ಪಟನಾ: ಬಿಹಾರದ ಲೋಕಸೇವಾ ಅಯೋಗದ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಉಪವಾಸ ಕೈಗೊಂಡಿರುವಾಗಲೇ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಪ್ರಶಾಂತ್ ಕಿಶೋರ್ ಸಾಮಾನ್ಯ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಹದೆಗೆಡಬಹುದು ಎಂದು ಪಕ್ಷದ ಅಧ್ಯಕ್ಷ ಮನೋಜ್ ಭಾರ್ತಿ ಹೇಳಿದ್ದಾರೆ.