ಸಾರಾಂಶ
ಭೋಪಾಲ್: ಗರ್ಭಾವಸ್ಥೆ ಬಗ್ಗೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಹೆಸರು ಬಳಸಿದಕ್ಕೆನಟಿ ಕರೀನಾ ಕಪೂರ್‌ಗೆ ಸಂಕಷ್ಟ ಎದುರಾಗಿದೆ. ಬೈಬಲ್ ಪದ ಬಳಕೆ ಮಾಡಿದ್ದರ ವಿರುದ್ಧ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಬಗ್ಗೆ ಸ್ಪಷ್ಟನೆ ಕೇಳಿ ಮಧ್ಯಪ್ರದೇಶದ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕರೀನಾ 2021ರಲ್ಲಿ ತಮ್ಮ ಗರ್ಭಾವಸ್ಥೆ ಕುರಿತಾದ ಅನುಭವ ಹಾಗೂ ಸಲಹೆಗಳನ್ನೊಳಗೊಂಡ ‘ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್’ ಎನ್ನುವ ಪುಸ್ತಕ ಪ್ರಕಟಿಸಿದ್ದರು. ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಹೆಸರು ಉಲ್ಲೇಖಿಸಿದ್ದಕ್ಕೆ ಕ್ರಿಸ್ಟೋಫರ್ ಅಂಥೋನಿ ಎನ್ನುವ ವಕೀಲರು ಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ನಟಿ ಮತ್ತು ಪುಸ್ತಕ ಮಾರಾಟಗಾರರಿಗೂ ನೋಟಿಸ್ ನೀಡಿದ್ದಾರೆ.ಬೈಬಲ್ ಪದ ಬಳಕೆಯಿಂದ ಕ್ರಿಶ್ಚಿಯನ್ನರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಪವಿತ್ರ ಗ್ರಂಥದ ಹೆಸರನ್ನು ಪ್ರಚಾರಕ್ಕಾಗಿ ಬಳಸುವುದು ತಪ್ಪು ಎಂದು ಕ್ರಿಸ್ಟೋಫರ್ ನ್ಯಾಯಾಲಯದ ಮೊರೆ ಹೋಗಿದ್ದರು .