ಸಾರಾಂಶ
ಬೆಂಗಳೂರು : ಪರಿಷತ್ ಶಾಸಕ ಸಿ.ಟಿ.ರವಿ ಅವರನ್ನು ಸುವರ್ಣಸೌಧ ವ್ಯಾಪ್ತಿಯಲ್ಲೇ ಬಂಧಿಸಿದ ಪೊಲೀಸರ ಕ್ರಮ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ಕಲಾಪ ನಿಯಮಾವಳಿಯ ಅನ್ವಯ, ಸಭಾಧ್ಯಕ್ಷರು ಅಥವಾ ಸಭಾಪತಿಗಳ ಅನುಮತಿ ಇಲ್ಲದೆ ಸದನದ ಒಳಗೆ ಯಾವುದೇ ಸದಸ್ಯರ ದಸ್ತಗಿರಿ ಅಥವಾ ಬಂಧನ ಮಾಡುವಂತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ನಿಯಮ 198ರ ಪ್ರಕಾರ, ಸದನದ ಒಳಗೆ ಯಾವುದೇ ಸದಸ್ಯರ ದಸ್ತಗಿರಿ ಅಥವಾ ಬಂಧನ ಮಾಡಲು ಸ್ಪೀಕರ್ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಯಾವುದೇ ಸಿವಿಲ್ ಮತ್ತು ಕ್ರಿಮಿನಲ್ ಸ್ವರೂಪದ ಕ್ರಮ ಜರುಗಿಸುವಂತಿಲ್ಲ. ಇನ್ನು ನಿಯಮ 199ರ ಪ್ರಕಾರ ಸದನದ ಹೊರಗೆ ಸದಸ್ಯರ ದಸ್ತಗಿರಿ, ಬಂಧನ ಮಾಡಿದರೆ ಮ್ಯಾಜಿಸ್ಟ್ರೇಟ್ ಅವರು ತಕ್ಷಣ ಸ್ಪೀಕರ್ ಅವರಿಗೆ ಮಾಹಿತಿ ನೀಡಬೇಕು. ಕ್ರಿಮಿನಲ್ ಪ್ರಕರಣಕ್ಕೆ ದಸ್ತಗಿರಿಯಾಗಿದ್ದರೆ, ನ್ಯಾಯಾಲಯದಿಂದ ಕಾರಾಗೃಹವಾಸ ಶಿಕ್ಷೆಯಾಗಿದ್ದರೆ ನ್ಯಾಯಾಲಯ ಅಥವಾ ಮ್ಯಾಜಿಸ್ಟ್ರೇಟ್ ಕೂಡಲೇ ಸ್ಪೀಕರ್ ಅವರಿಗೆ ತಿಳಿಸಬೇಕು.
ಸದನದ ನಡೆಯುತ್ತಿದ್ದಾಗ ಮಾಹಿತಿ ಲಭ್ಯವಾದರೆ ಸ್ಪೀಕರ್ ಅವರು ಸದನದಲ್ಲಿ ಬಂಧನದ ವಿಚಾರ ಓದಿ ಹೇಳಬೇಕು. ಅಧಿವೇಶನ ನಡೆಯದಿದ್ದಾಗ ತಿಳಿದರೆ ಲಘು ಪ್ರಕಟಣೆ ರೂಪದಲ್ಲಿ ಸದಸ್ಯರಿಗೆ ಮಾಹಿತಿ ತಲುಪಿಸಬೇಕು.