ಭೀಕರ ಕಾರು ದುರಂತ: ಸಚಿವೆ ಲಕ್ಷ್ಮಿ ಪ್ರಾಣಾಪಾಯದಿಂದ ಪಾರು

| Published : Jan 15 2025, 01:47 AM IST

ಭೀಕರ ಕಾರು ದುರಂತ: ಸಚಿವೆ ಲಕ್ಷ್ಮಿ ಪ್ರಾಣಾಪಾಯದಿಂದ ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಸಂಕ್ರಾಂತಿ ದಿನವೇ ಬೆಳ್ಳಂಬೆಳಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಸೋದರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಇದ್ದ ಎಂಯುವಿ ಕಾರು ಭೀಕರ ಅಪಘಾತಕ್ಕೆ ಈಡಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಕ್ರಾಂತಿ ದಿನವೇ ಬೆಳ್ಳಂಬೆಳಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಸೋದರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಇದ್ದ ಎಂಯುವಿ ಕಾರು ಭೀಕರ ಅಪಘಾತಕ್ಕೆ ಈಡಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಆದರೆ ಸುದೈವವಶಾತ್‌ ಏರ್‌ಬ್ಯಾಗ್‌ ತೆರೆದುಕೊಂಡ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಜಿಲ್ಲೆಯ ಚನ್ನಮ್ಮನ ಕಿತ್ತೂರು ಬಳಿ ನಸುಕಿನ ಜಾವ 5 ಗಂಟೆಗೆ ದುರಂತ ಸಂಭವಿಸಿದ್ದು, ಕಾರಿಗೆ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಅವರಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನು ಮತ್ತು ಮುಖಕ್ಕೆ ಗಾಯಗಳಾಗಿವೆ. ಅಲ್ಲದೆ, ಚನ್ನರಾಜ ಹಟ್ಟಿಹೊಳಿ ಅವರ ತಲೆಗೆ, ಕಿವಿಗೆ ಗಾಯ ಆಗಿದೆ. ಗನ್‌ಮ್ಯಾನ್‌, ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಎಲ್ಲರನ್ನೂ ಬೆಳಗಾವಿ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಚಿವರಿಗೆ ಚಿಕಿತ್ಸೆ ಮುಂದುವರಿದಿದೆ. ಚನ್ನರಾಜ ಹಟ್ಟಿಹೊಳಿ ಇತರರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅಪಘಾತ ಹೇಗಾಯ್ತು?:

ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ ಮುಗಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಸಂಕ್ರಾಂತಿ ಹಬ್ಬ ಮನೆಯಲ್ಲಿ ಆಚರಿಸುವ ಸಂಬಂಧ ಬೆಂಗಳೂರಿನಿಂದ ಬೆಳಗಾವಿಗೆ ಸರ್ಕಾರಿ ವಾಹನದಲ್ಲಿ ಸಂಚರಿಸುತ್ತಿದ್ದರು. ಕಪ್ಪು ಬಣ್ಣದ ಇನ್ನೋವಾ ಹೈ ಕ್ರಾಸ್ ಕಾರು ಇದಾಗಿದ್ದು, ನಸುಕಿನ 5 ಗಂಟೆಗೆ ಕಿತ್ತೂರು ಸನಿಯದ ಅಂಬಡಗಟ್ಟಿ ಬಳಿ ಸಾಗುತ್ತಿತ್ತು. ಆಗ ರಸ್ತೆಗೆ ಬಂದ ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾಗುತ್ತಿದ್ದಂತೆಯೇ ಎದುರು ಮತ್ತು ಪಕ್ಕದಲ್ಲಿದ್ದ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆ. ಇದರಿಂದಾಗಿಯೇ ಅದೃಷ್ಟವಶಾತ್‌ ಸಚಿವರು ಮತ್ತು ಅವರ ಸಹೋದರ ಅಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆಗೆ ಎಸ್ಪಿ ಭೇಟಿ, ವಿಚಾರಣೆ:

ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಚಿವರ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಸಚಿವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನರಾಜ ಹಟ್ಟಿಹೊಳಿ ಅವರ ತಲೆಗೆ‌ ಸಣ್ಣ ಗಾಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚಾಲಕ ಮತ್ತು ಗನ್ ಮ್ಯಾನ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ತೆರಳಿದ್ದಾರೆ’ ಎಂದು ತಿಳಿಸಿದರು.

ಸಚಿವೆ ಬೆನ್ನಿನ 2 ಮೂಳೆಗಳು ಸೀಳಿವೆ: ವೈದ್ಯ

‘ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರನ್ನು ಬೆಳಗ್ಗೆ 6.15ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಎಂಆರ್‌ಐ ಸ್ಕ್ಯಾನ್‌ ಮಾಡಿದಾಗ ಬೆನ್ನಿನ 2 ಮೂಳೆ ಎಲ್‌1, ಎಲ್‌4 ಅಲ್ಪ ಪ್ರಮಾಣದಲ್ಲಿ ಸೀಳಿರುವುದು ಕಂಡು ಬಂದಿದೆ. ಆದರೆ ಇದೇನು ಗಂಭೀರವಲ್ಲ’ ಎಂದು ಚಿಕಿತ್ಸೆ ನೀಡುತ್ತಿರುವ ಬೆಳಗಾವಿ ವಿಜಯಾ ಆಸ್ಪತ್ರೆ ವೈದ್ಯ ಡಾ. ರವಿ ಪಾಟೀಲ ತಿಳಿಸಿದ್ದಾರೆ. ಇದರ ಜತೆಗೆ ಕುತ್ತಿಗೆ, ಕೈ ಮತ್ತು ಕಾಲಿಗೂ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಒಂದು ತಿಂಗಳು ಬೆಡ್‌ ರೆಸ್ಟ್‌ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

2 ದಿನ ನಂತರ ಬಿಡುಗಡೆ:

ಸಚಿವರು 2 ದಿನಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ. ಇನ್ನು ಚನ್ನರಾಜ ಹಟ್ಟಿಹೊಳಿ ಅವರ ತಲೆಗೆ ಗಾಯವಾಗಿದೆ. ಅವರಿಗೂ ಚಿಕಿತ್ಸೆ ನೀಡಲಾಗಿದೆ. ಗನ್ ಮ್ಯಾನ್ ಮತ್ತು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಾ। ಪಾಟೀಲ ಮಾಹಿತಿ ನೀಡಿದರು.

ಶೀಘ್ರ ಗುಣಮುಖರಾಗಲಿ: ರವಿ ಹಾರೈಕೆ

ಕನ್ನಡಪ್ರಭ ವಾರ್ತೆ ಬೆಂಗಳೂರುಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಅವರ ಸಹೋದರ ವಿಧಾನ ಪರಿಷತ್‌ ಸದಸ್ಯ ಚನ್ನರಾಜ್‌ ಹಟ್ಟಿಹೊಳಿ ಶೀಘ್ರ ಗುಣಮುಖರಾಗಲಿ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಾರ್ಥಿಸಿದ್ದಾರೆ. ‘ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.