ಸಾರಾಂಶ
ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಕೇಟ್ ವಿನ್ಸ್ಲೆಟ್ ಇದೀಗ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ‘ಕೇಟ್ ಗುಡ್ ಬೈ ಜೂನ್’ ಎಂಬ ಸಿನಿಮಾ ನಿರ್ಮಿಸಲಿದ್ದಾರೆ. ಇದುವರೆಗೆ ಟೈಟಾನಿಕ್ ಸೇರಿದಂತೆ ಹಲವು ಚಿತ್ರಗಳ ಮೂಲಕ ಜನರ ಮನಸೂರೆಗೊಂಡಿದ್ದ ಕೇಟ್, ಹೊಸ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ವಿನ್ಸೆಟ್‌ರ ಪುತ್ರ ಜೋ ಆ್ಯಂಡರ್ಸ್ ಸಿನಿಮಾಗೆ ಕಥೆ ಬರೆದಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.
ನಮ್ಮಪ್ಪ ಲಾಲು ಪ್ರಸಾದ್ ಭಾರತ ರತ್ನಕ್ಕೆ ಅರ್ಹರು: ಪುತ್ರ ತೇಜಸ್ವಿ ಯಾದವ್
ಪಟನಾ: ‘ಸಮಾಜದ ಕೆಳ ವರ್ಗದವರ ಧ್ವನಿಯಾಗಿ ಶ್ರಮಿಸಿದ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರು ಭಾರತ ರತ್ನ ಪ್ರಶಸ್ತಿಗೆ ಅರ್ಹರು’ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ. ಇಲ್ಲಿನ ಸಹರ್ಸಾ ಜಿಲ್ಲೆಯ ಸೋನ್ಬರ್ಸಾದಲ್ಲಿ ಕರ್ಪೂರಿ ಠಾಕೂರ್ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಲಾಲು ಜೀ ವಿರುದ್ಧ ಅನೇಕ ಜನರು ನಿಂದಿಸುತ್ತಿರುವುದನ್ನು ನಾವು ನೋಡುತ್ತೇವೆ. ಅಸ್ಪ್ರೃಶ್ಯತೆಗೆ ಒಳಗಾದವರಿಗೆ , ಬಾವಿಗೆ ಪ್ರವೇಶ ನಿರಾಕರಿಸಿದ , ಹೊಸ ಬಟ್ಟೆ ಖರೀದಿಸಲು ಮತ್ತು ಹಾಸಿಗೆಯ ಮೇಲೆ ಕುಳಿತುಕೊಳ್ಳಲು ಅವಕಾಶವಿಲ್ಲದ ಕಾಲದಲ್ಲಿ ಧ್ವನಿಯಿಲ್ಲದವರಿಗೆ ಧ್ವನಿಯಾದವರಿಗೆ ಜನ ಭಾರತ ರತ್ನ ನೀಡಲು ಒಂದು ದಿನ ಧ್ವನಿ ಎತ್ತುತ್ತಾರೆ’ ಎಂದಿದ್ದಾರೆ.
ದುಬಾರಿ ದರವಿದ್ದರೂ ಜನವರಿಯಲ್ಲಿ ₹23000 ಕೋಟಿಯ ಚಿನ್ನ ಆಮದು
ನವದೆಹಲಿ: ವಿಶ್ವದ 2ನೇ ದೊಡ್ಡ ಚಿನ್ನ ಖರೀದಿದಾರ ದೇಶವಾಗಿರುವ ಭಾರತವು ಈ ವರ್ಷದ ಜನವರಿಯಲ್ಲಿ 23 ಸಾವಿರ ಕೋಟಿ ರು. ಮೌಲ್ಯದ ಚಿನ್ನ ಆಮದು ಮಾಡಿಕೊಂಡಿದೆ. 2024ರ ಜನವರಿಯಲ್ಲಿ ಆಮದಾದ ಚಿನ್ನದ ಮೌಲ್ಯ 16 ಸಾವಿರ ಕೋಟಿ ರು.ನಷ್ಟಿತ್ತು. ಅಂದರೆ 7000 ಕೋಟಿ ರು.ಹೆಚ್ಚಿನ ಮೊತ್ತದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಚಿನ್ನದ ದರ ಗಗನಕ್ಕೇರಿದ್ದರೂ, ಜಾಗತಿಕ ಅನಿಶ್ಚಿತತೆ, ಬ್ಯಾಂಕುಗಳಿಂದ ಬೇಡಿಕೆ ಹೆಚ್ಚಳ, ಸುಂಕ ಕಡಿತ, ಚಿಲ್ಲರೆ ಮಾರಾಟಗಾರರಿಂದ ಹೆಚ್ಚಿನ ಬೇಡಿಕೆ ಕಂಡುಬಂದ ಕಾರಣ ಆಮದು ಹೆಚ್ಚಾಗಿದೆ.
ಪೂಜಾ ಸ್ಥಳ ಕಾಯ್ದೆ ಬಗ್ಗೆ ಅಸಂಖ್ಯ ಅರ್ಜಿಗೆ ಸುಪ್ರೀಂ ಕಿಡಿ: ಏಪ್ರಿಲ್‌ಗೆ ವಿಚಾರಣೆ
ನವದೆಹಲಿ: ಸ್ವಾತಂತ್ರ್ಯಾನಂತರ ಧಾರ್ಮಿಕ ಸ್ಥಳಗಳ ಪರಿವರ್ತನೆಯನ್ನು ನಿರ್ಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅನುಕೂಲ ಮಾಡಿಕೊಡುವ ಪೂಜಾ ಸ್ಥಳಗಳ ಕಾಯ್ದೆ 1991ರ ಕುರಿತು ಭಾರೀ ಪ್ರಮಾಣದ ಅರ್ಜಿ ಸಲ್ಲಿಕೆ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನು ಮುಂದೆ 1991 ಕಾಯ್ದೆಗೆ ಸಂಬಂಧಿಸಿದ ಎಲ್ಲಾ ಅರ್ಜಿ ರದ್ದುಪಡಿಸುತ್ತೇವೆ. ಈವರೆಗೆ ಪ್ರಸ್ತಾಪವಾಗದ ಹೊಸ ಅಂಶ, ಕಾನೂನು ಸಮಸ್ಯೆ ಬಗ್ಗೆ ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಜೊತೆಗೆ ಈವರೆಗೆ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್‌ನಲ್ಲಿ ನಡೆಸಲಾಗುವುದು ಎಂದು ತಿಳಿಸಿದೆ. ಕಾಯ್ದೆ ಪರ ಮತ್ತು ವಿರೋಧವಾಗಿ ಹಲವು ಅರ್ಜಿ ಸಲ್ಲಿಸಲಾಗಿದೆ.
ಮನೆ ಕೊರತೆ: ಆಸಿಸ್‌ನಲ್ಲಿ ವಿದೇಶಿಗರ ಮನೆ ಖರೀದಿಗೆ 2 ವರ್ಷ ನಿಷೇಧ ಹೇರಿಕೆ
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ವಸತಿ ಕೊರತೆ ವಿಪರೀತವಾಗಿದ್ದು, ಇದರ ಪರಿಣಾಮ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅಲ್ಲಿನ ಆಡಳಿತವು ವಿದೇಶಿಗರ ಮನೆ ಖರೀದಿ ಮೇಲೆ 2 ವರ್ಷ ನಿಷೇಧ ಹೇರಿದೆ. ಈ ನಿಷೇಧವು ಏ.1ರಿಂದ 2027ರ ಮಾ.31ರ ಅವಧಿವರೆಗೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮದಿಂದಾಗಿ ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ವಲಗರಿಗೂ ತೊಂದರೆಯಾಗುವ ಸಾಧ್ಯತೆ ಇದ್ದು, ಹೊಡೆತ ಬೀಳುವ ಆತಂಕ ಎದುರಾಗಿದೆ. ಆಸ್ಟ್ರೇಲಿಯಾದಲ್ಲಿ ವಸತಿಯು ಜೀವನ ವೆಚ್ಚದ ಬಹುಪಾಲು ತೆಗೆದುಕೊಳ್ಳಲಿದ್ದು, ಈ ಕ್ರಮದಿಂದಾಗಿ ಅದು ಇನ್ನಷ್ಟು ಏರಿಕೆಯಾಗುವ ಭೀತಿ ಮುಂದಿದೆ ಎನ್ನಲಾಗಿದೆ.