ನಟಿ ಕೀರ್ತಿ ಸುರೇಶ್‌ ಯುನಿಸೆಫ್‌ ಇಂಡಿಯಾ ಪ್ರಚಾರ ರಾಯಭಾರಿ

| Published : Nov 17 2025, 12:45 AM IST

ನಟಿ ಕೀರ್ತಿ ಸುರೇಶ್‌ ಯುನಿಸೆಫ್‌ ಇಂಡಿಯಾ ಪ್ರಚಾರ ರಾಯಭಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಪ್ರಶಸ್ತಿ ವಿಜೇತ ಬಹುಭಾಷಾ ನಟಿ ಕೀರ್ತಿ ಸುರೇಶ್‌ ಅವರನ್ನು ಯುನಿಸೆಫ್‌ ಇಂಡಿಯಾದ ಸೆಲೆಬ್ರಿಟಿ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ನವದೆಹಲಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಬಹುಭಾಷಾ ನಟಿ ಕೀರ್ತಿ ಸುರೇಶ್‌ ಅವರನ್ನು ಯುನಿಸೆಫ್‌ ಇಂಡಿಯಾದ ಸೆಲೆಬ್ರಿಟಿ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಜನಪ್ರಿಯರಾಗಿರುವ ನಟಿ ಇದೀಗ ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಅವರ ಆಳವಾದ ಪ್ರಭಾವವು ಮಕ್ಕಳ ಹಕ್ಕು ಮತ್ತು ಯೋಗಕ್ಷೇಮಕ್ಕಾಗಿ ಹೋರಾಡಲು ಸ್ಫೂರ್ತಿದಾಯಕ ವೇದಿಕೆ ಒದಗಿಸುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಯುನಿಸೆಫ್ ಇಂಡಿಯಾ, ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್‌ನ ಭಾರತದಲ್ಲಿನ ಶಾಖೆ. ಇದು ಮಕ್ಕಳ ಹಕ್ಕುಗಳು, ಆರೋಗ್ಯ, ಶಿಕ್ಷಣ, ಪೋಷಣೆ, ನೀರು-ನೈರ್ಮಲ್ಯ ಮತ್ತು ತುರ್ತು ಸಹಾಯಕ್ಕಾಗಿ ಕೆಲಸ ಮಾಡುತ್ತದೆ.

==

ಇಂದಿನಿಂದ ಶಬರಿಮಲೆ ಮಂಡಲ ಯಾತ್ರೆ ಆರಂಭ

ಪಟ್ಟಣಂತಿಟ್ಟ (ಕೇರಳ): ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಮಂಡಲ ಯಾತ್ರೆ ಸೋಮವಾರದಿಂದ ಆರಂಭವಾಗಲಿದೆ. ಈ ನಿಮಿತ್ತ ಭಾನುವಾರ ಸಂಜೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಮೊದಲ ದಿನವೇ ಭಾರಿ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡದರು.ವೃಚಿಕಂ ಋತುವಿನ ಆರಂಭದ ದಿನವಾದ ಸೋಮವಾರದಿಂದ ಪ್ರಾರಂಭವಾಗಿ 41 ದಿನಗಳ ಕಾಲ ವಾರ್ಷಿಕ ಯಾತ್ರೆ ನಡೆಯಲಿದೆ. ಈ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಮಂದಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದಾರೆ. ಯಾತ್ರೆಯ ಮೊದಲ ದಿನವಾದ ಸೋಮವಾರ, ದೇವಸ್ವಂ ಅಧಿಕಾರಿಗಳು ದರ್ಶನಕ್ಕಾಗಿ ಭಕ್ತರಿಗೆ ಒಟ್ಟು 70,000 ವರ್ಚುವಲ್ ಕ್ಯೂ ಪಾಸ್‌ಗಳನ್ನು ವಿತರಿಸಿದ್ದಾರೆ.

==

ರಷ್ಯಾದಿಂದ ತೈಲ ಖರೀದಿ ಕಮ್ಮಿ ಮಾಡದ ಭಾರತ

ಸೆಪ್ಟೆಂಬರ್‌ನಷ್ಟೇ ಮೊತ್ತದ ತೈಲ ಅಕ್ಡೋಬರಲ್ಲೂ ಖರೀದಿ

ಭಾರತದಿಂದ ಕಲ್ಲಿದ್ದಲು, ತೈಲ ಉತ್ಪನ್ನಗಳೂ ಖರೀದಿ

ನವದೆಹಲಿ: ಒಂದು ಕಡೆ ರಷ್ಯಾದಿಂದ ಭಾರತವು ಕಚ್ಚಾ ತೈಲ ಆಮದು ಕಡಿತಗೊಳಿಸಿದೆ ಎಂದು ಅಮೆರಿಕ ಹೇಳುತ್ತಿದ್ದರೆ ಮತ್ತೊಂದು ಕಡೆ, ಅಕ್ಟೋಬರ್‌ ತಿಂಗಳಲ್ಲಿ ಭಾರತವು ಸೆಪ್ಟೆಂಬರ್ ತಿಂಗಳಿನಷ್ಟೇ 25,600 ಕೋಟಿ ರು. ಮೌಲ್ಯದ ತೈಲ ಖರೀದಿಸಿದೆ ಎಂದು ಯುರೋಪ್‌ನ ಚಿಂತಕರ ಚಾವಡಿ ತಿಳಿಸಿದೆ.

ರಷ್ಯಾದ ತೈಲ ಸಂಸ್ಥೆಗಳ ಮೇಲೆ ಅಮೆರಿಕವು ನಿರ್ಬಂಧ ಹೇರುವ ಮುನ್ನ ಭಾರತವು ಭಾರೀ ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಖರೀದಿ ಮಾಡಿದೆ. ಈ ಹಿಂದಿನ ಸೆಪ್ಟೆಂಬರ್‌ ತಿಂಗಳಷ್ಟೇ ಕಚ್ಚಾತೈಲವನ್ನು ಅಕ್ಟೋಬರ್ ತಿಂಗಳಲ್ಲೂ ಭಾರತ ಖರೀದಿ ಮಾಡಿದೆ. ರಷ್ಯಾದಿಂದ ಅತೀ ಹೆಚ್ಚು ತೈಲ ಖರೀದಿ ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 2ನೇ ಸ್ಥಾನವಿದೆ ಎಂದು ಯುರೋಪ್‌ನ ಸೆಂಟರ್‌ ಫಾರ್‌ ರಿಸರ್ಚ್ ಆನ್‌ ಎನರ್ಜಿ ಆ್ಯಂಡ್‌ ಕ್ಲೀನ್‌ ಏರ್‌(ಸಿಆ್‌ಇಎ) ತನ್ನ ವರದಿಯಲ್ಲಿ ತಿಳಿಸಿದೆ.ಅ.22ರಂದು ಅಮೆರಿಕವು ರಷ್ಯಾದ ಅತಿದೊಡ್ಡ ತೈಲ ಉತ್ಪಾದಕ ಸಂಸ್ಥೆಗಳಾದ ರೋಸ್‌ನೆಫ್ಟ್‌ ಮತ್ತು ಲುಕೋಯಿಲ್‌ ಮೇಲೆ ನಿರ್ಬಂಧ ಹೇರಿತ್ತು. ಉಕ್ರೇನ್‌ ಯುದ್ಧಕ್ಕೆ ರಷ್ಯಾ ಮಾಡುತ್ತಿರುವ ವೆಚ್ಚಕ್ಕೆ ಬ್ರೇಕ್‌ ಹಾಕಲು ಈ ಕ್ರಮ ಕೈಗೊಂಡಿತ್ತು. ಆ ಬಳಿಕ ಭಾರತವು ತೈಲ ಖರೀದಿ ಕಡಿಮೆ ಮಾಡಿದೆ.

ರಷ್ಯಾವು ಒಟ್ಟು 60 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಅಕ್ಟೋಬರ್‌ ತಿಂಗಳಲ್ಲಿ ರಫ್ತು ಮಾಡಿತ್ತು. ಇದರಲ್ಲಿ ರೋಸ್‌ನೆಫ್ಟ್‌ ಹಾಗೂ ಲುಕೋಯಿಲ್‌ ಸಂಸ್ಥೆಗಳೇ ಸುಮಾರು 45 ದಶಲಕ್ಷ ಬ್ಯಾರೆಲ್‌ನಷ್ಟು ತೈಲ ರಫ್ತು ಮಾಡಿದ್ದವು. ಭಾರತವು ರಷ್ಯಾದಿಂದ ತೈಲವಲ್ಲದೆ 3,600 ಕೋಟಿ ರು. ಕಲ್ಲಿದ್ದಲು, 2,200 ಕೋಟಿ ರು. ತೈಲ ಉತ್ಪನ್ನಗಳನ್ನೂ ಆಮದು ಮಾಡಿಕೊಂಡಿದೆ.

ಈ ಹಿಂದೆ ಭಾರತವು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹೆಚ್ಚಿನ ತೈಲ ಖರೀದಿ ಮಾಡುತ್ತಿತ್ತು. ಆದರೆ ಕಡಿಮೆ ದರದಲ್ಲಿ ತೈಲ ಸಿಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತ ರಷ್ಯಾದ ಕಡೆ ಮುಖಮಾಡಿದೆ. ಹೀಗಾಗಿ ರಷ್ಯಾದಿಂದ ಭಾರತದ ಕಚ್ಚಾತೈಲ ಆಮದು ದಿಢೀರ್‌ ಶೇ.1ರಿಂದ ಶೇ.40ಕ್ಕೇರಿದೆ.

==

ಬಿಹಾರ ಚುನಾವಣಾ ರಾಯಭಾರಿ ಸ್ಥಾನದಿಂದ ನಟಿ ನೀತು ವಜಾ

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಯಭಾರಿಯಾಗಿ ನೇಮಕಗೊಂಡಿದ್ದ ನಟಿ ನೀತು ಚಂದ್ರ ಅವರನ್ನು ಚುನಾವಣಾ ಆಯೋಗವು ಆ ಸ್ಥಾನದಿಂದ ವಜಾಗೊಳಿಸಿದೆ. ರಾಜಕೀಯ ಪಕ್ಷಗಳ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಈ ಕ್ರಮ ಕೈಗೊಂಡಿದೆ.ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕಾಗಿ ನಿತು ಅವರನ್ನು ಆಯೋಗ ರಾಯಭಾರಿಯನ್ನಾಗಿ (ಎಸ್‌ವಿಇಇಪಿ) ನೇಮಿಸಿತ್ತು. ಈ ಸಂದರ್ಭದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡುವುದಕ್ಕೆ ನಿರ್ಬಂಧವಿದ್ದರೂ ಕೆಲವು ರಾಜಕೀಯ ಪಕ್ಷಗಳ ಪರ ಅಭಿಪ್ರಾಯ ಮಂಡಿಸಿದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಚುನಾವಣಾ ಆಯೋಗ ವಜಾಗೊಳಿಸಿದೆ.

==

ಎಸ್ಸಿ ಕೆನೆಪದರವನ್ನು ಮೀಸಲಿಂದ ಹೊರಗಿಡಬೇಕು: ಸಿಜೆಐ

2024ರ ತಮ್ಮ ತೀರ್ಪು ಸಮರ್ಥಿಸಿಕೊಂಡ ನ್ಯಾ.ಗವಾಯಿ

ಅಮರಾವತಿ: ಪರಿಶಿಷ್ಟ ಜಾತಿಯಲ್ಲಿರುವ ಕೆನೆಪದರ (ಈಗಾಗಲೇ ಮೀಸಲಾತಿಯ ಲಾಭಪಡೆದು ಮುಂದುವರಿದವರು) ವನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ಆಂಧ್ರಪ್ರದೇಶದ ಅಮರಾವತಿಯಲ್ಲಿ ಆಯೋಜಿಸಿದ್ದ ‘ಇಂಡಿಯಾ ಆ್ಯಂಡ್‌ ದಿ ಲಿವಿಂಗ್‌ ಇಂಡಿಯನ್‌ ಕಾನ್ಸ್‌ಸ್ಟಿಟ್ಯೂಷನ್‌ ಅಟ್‌ 75 ಇಯರ್ಸ್‌’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮೀಸಲಾತಿ ವಿಚಾರ ಬಂದಾಗ ಐಎಎಸ್‌ ಅಧಿಕಾರಿಯ ಮಕ್ಕಳನ್ನು ಬಡ ಕೃಷಿ ಕಾರ್ಮಿಕನ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ’ ಎಂದರು,ಮೀಸಲಾತಿಗೆ ಸಂಬಂಧಿಸಿ 2024ರಲ್ಲಿ ಪ್ರಕರಣವೊಂದರಲ್ಲಿ ನ್ಯಾ.ಗವಾಯಿ ಅವರು ರಾಜ್ಯ ಸರ್ಕಾರಗಳು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಲ್ಲೂ ಕೆನೆಪದರಗಳನ್ನು ಗುರುತಿಸುವ ನೀತಿ ಜಾರಿಗೆ ತರಬೇಕು. ಕೆನೆಪದರದವರಿಗೆ ಮೀಸಲಾತಿಯ ಲಾಭ ನಿರಾಕರಿಸಬೇಕು ಎಂದು ತೀರ್ಪು ನೀಡಿದ್ದರು.

ಈ ತೀರ್ಪನ್ನು ಸಮರ್ಥಿಸಿಕೊಂಡ ಅವರು, ಕೆನೆಪದರ ವಿಚಾರವು ಇಂದಿರಾ ಸಾಹ್ನಿ(v/sಕೇಂದ್ರ ಸರ್ಕಾರ ಮತ್ತು ಇತರರು) ಕೇಸ್‌ನಲ್ಲಿ ಪ್ರಸ್ತಾಪವಾಗಿದೆ. ಕೆನೆಪದರ ಹೇಗೆ ಇತರೆ ಹಿಂದುಳಿದ ವರ್ಗಗಳಿಗೆ ಅನ್ವಯಿಸುತ್ತದೆಯೋ ಅದೇ ರೀತಿ ಪರಿಶಿಷ್ಟ ಜಾತಿಗಳಿಗೂ ಅನ್ವಯವಾಗಬೇಕೆಂದು 2024ರಲ್ಲಿ ನಾನು ನೀಡಿದ್ದ ತೀರ್ಪು ತೀವ್ರ ಟೀಕೆಗೆ ಗುರಿಯಾದ ಹೊರತಾಗಿಯೂ ಪ್ರತಿಪಾದಿಸುತ್ತೇನೆ ಎಂದರು.

ಸಾಮಾನ್ಯವಾಗಿ ನ್ಯಾಯಾಧೀಶರು ತಮ್ಮ ತೀರ್ಪನ್ನು ಸಮರ್ಥಿಸಿಕೊಳ್ಳಬಾರದು ಎಂದು ನಂಬಿದವನು ನಾನು. ನಾನು ಸಿಜೆಐ ಸ್ಥಾನದಿಂದ ನಿವೃತ್ತಿಗೆ ಇನ್ನೂ ಒಂದು ವಾರ ಕಾಲಾವಕಾಶ ಇದೆ ಎಂದು ಇದೇ ವೇಳೆ ತಿಳಿಸಿದರು.ಅಮರಾವತಿಯಲ್ಲೇ ಆರಂಭ, ಕೊನೆ:

ನನ್ನ ನಿವೃತ್ತಿಗೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಾನು ಪಾಲ್ಗೊಳ್ಳುತ್ತಿರುವ ಕೊನೆಯ ಸಾರ್ವಜನಿಕ ಕಾರ್ಯಕ್ರಮ ಆಂಧ್ರ ಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ವಿಶೇಷವೆಂದರೆ ನಾನು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಾಲ್ಗೊಂಡ ಮೊದಲ ಕಾರ್ಯಕ್ರಮ ಹುಟ್ಟೂರು ಮಹಾರಾಷ್ಟ್ರದ ಅಮರಾವತಿಯಲ್ಲಿ ಆಯೋಜಿಸಲಾಗಿತ್ತು ಎಂದು ಈ ಸಂದರ್ಭದಲ್ಲಿ ಅವರು ಸ್ಮರಿಸಿದರು.