ಸಾರಾಂಶ
ನವದೆಹಲಿ: ಕಳೆದ ಮೂರುವರೆ ವರ್ಷಗಳಿಂದ ರಷ್ಯಾ ಜೊತೆ ಯುದ್ಧ ನಡೆಸುತ್ತಿರುವ ಉಕ್ರೇನ್‌ನ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರು ಶೀಘ್ರದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಉಕ್ರೇನ್‌ನ ಭಾರತದ ರಾಯಭಾರಿ ಒಲೆಕ್ಸಾಂಡರ್ ಪೊಲಿಷ್‌ಚುಕ್ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಪೊಲಿಷ್‌ಚುಕ್, ‘ಕಳೆದ ವರ್ಷ ಆ.23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಲೆನ್‌ಸ್ಕಿ ಅವರಿಗೆ ಆಹ್ವಾನ ನೀಡಿದ್ದರು. ಇದರ ಭಾಗವಾಗಿ ಜೆಲೆನ್‌ಸ್ಕಿ ಅವರ ಆಗಮನಕ್ಕೆ ಶೀಘ್ರವಾಗಿ ದಿನಾಂಕ ನಿಗದಿಯಾಗಲಿದೆ. ದಿನಾಂಕವು ಕೆಲ ದಿನಗಳಲ್ಲಿ ಪ್ರಕಟವಾಗಲಿದೆ’ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಆ.23ರಂದು ಮೋದಿ ಅವರು ಉಕ್ರೇನ್‌ಗೆ ಐತಿಹಾಸಿಕ ಭೇಟಿ ನೀಡಿದ್ದರು.
ಯೆಮೆನ್ ಮೇಲೆ ಇಸ್ರೇಲ್ ವಾಯುದಾಳಿ: ಅಧ್ಯಕ್ಷರ ಮನೆ ಪಕ್ಕ ಸ್ಫೋಟ
ಕೈರೋ: ಹೌತಿ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಕೆಲವೇ ದಿನಗಳ ನಂತರ, ಇಸ್ರೇಲ್ ಭಾನುವಾರ ಯೆಮೆನ್ ರಾಜಧಾನಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದು ಇರಾನ್ ಬೆಂಬಲಿತ ಹೌತಿ ಉಗ್ರರ ಗುರಿಯಾಗಿಸಿ ನಡೆಸಿದ ದಾಳಿ ಆಗಿದೆ.ರಾಜಧಾನಿ ಸನಾದಲ್ಲಿ ವಿದ್ಯುತ್ ಹಾಗೂ ಅನಿಲ ಕೇಂದ್ರ ಸೇರಿದಂತೆ ಹಲವಾರು ಪ್ರದೇಶಗಳ ಮೇಲೆ ದಾಳಿಗಳು ನಡೆದಿವೆ ಎಂದು ಹೌತಿ ಮಾಧ್ಯಮ ಕಚೇರಿ ತಿಳಿಸಿದೆ. ಅಧ್ಯಕ್ಷೀಯ ಅರಮನೆಯ ಹತ್ತಿರ ಸೇರಿ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳ ದೊಡ್ಡ ಶಬ್ದಗಳು ಕೇಳಿಬಂದಿವೆ.
ಅನಿಲ್ ಅಂಬಾನಿಗೆ ಬ್ಯಾಂಕ್ ಆಫ್ ಇಂಡಿಯಾ ‘ವಂಚಕ’ ಪಟ್ಟ
ನವದೆಹಲಿ : ಎಸ್‌ಬಿಐ ಬೆನ್ನಲ್ಲೇ, ಬ್ಯಾಂಕ್ ಆಫ್ ಇಂಡಿಯಾ ಕೂಡ ಉದ್ಯಮಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ. (ಆರ್‌ಕಾಂ) ಮಾಜಿ ನಿರ್ದೇಶಕ ಅನಿಲ್ ಅಂಬಾನಿ ಅವರ ಮೇಲೆ ವಂಚನೆ ಆರೋಪ ಹೊರಿಸಿದೆ. 2016ರಲ್ಲಿ ಅವರಿಗೆ ನೀಡಲಾಗಿದ್ದ ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದನ್ನು ಉಲ್ಲೇಖಿಸಿ ಬ್ಯಾಂಕ್ ಈ ಕ್ರಮ ಕೈಗೊಂಡಿದ್ದು, ವಂಚಕ ಎಂಬ ಹಣೆಪಟ್ಟಿ ನೀಡಿದೆ.
ಆರ್‌ಕಾಂನ ಕಾರ್ಯಾಚರಣೆಯ ವೆಚ್ಚ ಮತ್ತು ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳ ಮರುಪಾವತಿಗಾಗಿ 2016ರ ಆಗಸ್ಟ್‌ನಲ್ಲಿ ಸರ್ಕಾರಿ ಒಡೆತನದ ಬ್ಯಾಂಕ್ ಆಫ್ ಇಂಡಿಯಾ 700 ಕೋಟಿ. ರು ಸಾಲ ಕೊಟ್ಟಿತ್ತು. ಆದರೆ ಅದರ ಅರ್ಧದಷ್ಟು ಮೊತ್ತವನ್ನು ಅದೇ ವರ್ಷದ ಅಕ್ಟೋಬರನಲ್ಲಿ ಸ್ಥಿತ ಠೇವಣಿ(ಎಫ್‌ಡಿ)ಯಲ್ಲಿ ಹೂಡಿಕೆ ಮಾಡಲಾಗಿತ್ತು.
ಇದು ಸಾಲ ನೀಡುವ ವೇಳೆ ಮಾಡಿಕೊಳ್ಳಲಾಗಿದ್ದ ಒಪ್ಪಂದಕ್ಕೆ ವಿರುದ್ಧವಾಗಿತ್ತು. ಈ ಹಿನ್ನೆಲೆಯಲ್ಲಿ, ಅನಿಲ್ ಮತ್ತು ಆರ್‌ಕಾಂನ ಇನ್ನೋರ್ವ ನಿರ್ದೇಶಕಿ ಮಂಜರಿ ಅಶೋಕ್ ಕಾಕರ್ ಮೇಲೆ ಅದು ವಂಚನೆ ಆರೋಪ ಹೊರಿಸಿದೆ.ಎಸ್‌ಬಿಐಗೆ 2,929 ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅನಿಲ್ ಅಂಬಾನಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶನಿವಾರವಷ್ಟೇ ದಾಳಿ ನಡೆಸಿದ್ದರು.
1971ರ ವಿಮೋಚನಾ ಯುದ್ಧ; ಪಾಕ್ ಕ್ಷಮೆಗೆ ಬಾಂಗ್ಲಾ ಆಗ್ರಹ
ಢಾಕಾ: ಹಸೀನಾ ಸರ್ಕಾರ ಉರುಳಿ 1 ವರ್ಷ ಪೂರೈಸಿರುವ ಹೊತ್ತಿನಲ್ಲಿ, ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಬಾಂಗ್ಲಾದೇಶಕ್ಕೆ 2 ದಿನಗಳ ಭೇಟಿ ನೀಡಿದ್ದಾರೆ. ಈ ವೇಳೆ, ಅಲ್ಲಿನ ವಿದೇಶಾಂಗ ಸಲಹೆಗಾರ ತೌಹಿದ್ ಹೊಸೇನ್ ಜತೆ ಮಾತುಕತೆ ನಡೆಸಿ, ‘1971ರ ಬಾಂಗ್ಲಾ ವಿಮೋಚನಾ ಕದನ’ ವಿಚಾರದಲ್ಲಿ ಉಭಯ ದೇಶಗಳ ನಡುವೆ ಉಂಟಾಗಿದ್ದ ಬಿಕ್ಕಟ್ಟು ತಣಿದಿದೆ ಎಂದಿದ್ದಾರೆ.ಆದರೆ ಇದನ್ನು ಬಾಂಗ್ಲಾದೇಶ ಸರ್ಕಾರ ನಿರಾಕರಿಸಿದ್ದು, ‘ವಿಷಯ ಇತ್ಯರ್ಥವಾಗಿಲ್ಲ. ಪಾಕ್ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದೆ. ‘71ರ ಯುದ್ಧದ ವೇಳೆ ಬಾಂಗ್ಲನ್ನರ ಮೇಲೆ ಪಾಕ್ ಸೇನೆ ನಡೆಸಿದ ಕ್ರೌರ್ಯಕ್ಕೆ ಪಾಕ್ ಕ್ಷಮೆ ಕೇಳಲಿ’ ಎಂಬುದು ಬಾಂಗ್ಲಾ ಒತ್ತಾಯ.
ಕೇರಳ ದೇಗುಲಗಳಲ್ಲಿ ರಾಜಕೀಯ ಚಟುವಟಿಕೆ ನಿಷಿದ್ಧ: ಹೈಕೋರ್ಟ್
ಪಿಟಿಐ ಕೊಚ್ಚಿತಮ್ಮ ನಿಯಂತ್ರಣದಲ್ಲಿ ಬರುವ ದೇವಾಲಯಗಳ ಆವರಣದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಕೇರಳ ಹೈಕೋರ್ಟ್ ರಾಜ್ಯದ 3 ಪ್ರಮುಖ ದೇವಸ್ವಂ ಮಂಡಳಿಗಳಿಗೆ ನಿರ್ದೇಶನ ನೀಡಿದೆ.
ತಿರುವಾಂಕೂರು, ಕೊಚಿನ್ ಹಾಗೂ ಮಲಬಾರ್ ದೇವಸ್ವಂ ಮಂಡಳಿಗಳಿಗೆ ಈ ನಿರ್ದೇಶನ ನೀಡಲಾಗಿದೆ.
ಎರ್ನಾಕುಲಂ ನಿವಾಸಿ ಎನ್. ಪ್ರಕಾಶ್ ಎಂಬುವವರು, ‘ಕೋಝಿಕ್ಕೋಡ್‌ನ ತಾಳಿ ದೇವಸ್ಥಾನ, ಅಟ್ಟಿಂಗಲ್‌ನಲ್ಲಿರುವ ಇಂದೀಲಯಪ್ಪನ್ ದೇವಸ್ಥಾನ, ಕೊಲ್ಲಂನ ಕಡಕ್ಕಲ್ ದೇವಿ ದೇವಸ್ಥಾನ ಮೊದಲಾದವುಗಳನ್ನು ರಾಜಕೀಯ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಂಥ ಚಟುವಟಿಕೆಗಳು ಅಸಮಂಜಸವಾಗಿದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತವೆ. ಅವುಗಳನ್ನು ನಿಯಂತ್ರಿಸಬೇಕು’ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಪೀಠ, ‘ಧಾರ್ಮಿಕ ಸಂಸ್ಥೆಗಳು (ದುರುಪಯೋಗ ತಡೆ) ಕಾಯ್ದೆ ಪ್ರಕಾರ, ದೇವಸ್ಥಾನ ಅಥವಾ ಅದರ ವ್ಯವಸ್ಥಾಪಕರಿಗೆ ಯಾವುದೇ ರಾಜಕೀಯ ಚಟುವಟಿಕೆಗಳಿಗಾಗಿ ದೇವಸ್ಥಾನದ ಆವಾರವನ್ನು ಬಳಸಿಕೊಳ್ಳುವ ಅಥವಾ ಬಳಕೆಗೆ ಅವಕಾಶ ನೀಡುವ ಅಧಿಕಾರವಿಲ್ಲ. ತಿರುವಾಂಕೂರು, ಕೊಚಿನ್ ಹಾಗೂ ಮಲಬಾರ್ ದೇವಸ್ವಂ ಮಂಡಳಿಗಳು ತಮ್ಮ ನಿಯಂತ್ರಣದಲ್ಲಿರುವ ದೇವಾಲಯಗಳಲ್ಲಿ ಅಂಥ ಚಟುವಟಿಕೆಗಳು ನಡೆಯದಂತೆ ಖಚಿತಪಡಿಸಿಕೊಳ್ಳಬೇಕು. ಇದರ ಉಲ್ಲಂಘನೆ ಮಾಡಿದ್ದು ತಿಳಿದುಬಂದರೆ, ಮಂಡಳಿಗಳು ತಡಮಾಡದೆ ಕಾನೂನು ಜಾರಿ ಪ್ರಾಧಿಕಾರದ ಗಮನಕ್ಕೆ ತರಬೇಕು. ಕಾನೂನು ಪ್ರಕಾರ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನಿರ್ದೇಶಿಸಿತು.