ಸಾರಾಂಶ
ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ವಾಷಿಂಗ್ಟನ್ ": ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಉಕ್ರೇನ್ ಹೊರಗಿಟ್ಟು ನಡೆಯುತ್ತಿರುವ ಈ ಶಾಂತಿ ಮಾತುಕತೆ ಇದೀಗ ವಿಶ್ವದ ಗಮನಸೆಳೆದಿದೆ.ಈ ಮಾತುಕತೆ ವೇಳೆ ಕದನವಿರಾಮ, ಭೂಭಾಗ ಮತ್ತು ಕೈದಿಗಳ ಹಸ್ತಾಂತರ ವಿಚಾರವೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ. ಯುದ್ಧ ನಿಲ್ಲಿಸದಿದ್ದರೆ ರಷ್ಯಾ ಮೇಲೆ ಕ್ರಮ ಜರುಗಿಸುವುದಾಗಿ ಟ್ರಂಪ್ ಹೇಳಿದ್ದ ಕಾರಣ ಈ ಮಾತುಕತೆಯ ಫಲಿತಾಂಶ ಏನಾಗಲಿದೆ ಎಂಬುದು ಕುತೂಹಲಕರ.
ಅಮೆರಿಕವು ತ್ರಿಪಕ್ಷೀಯ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿತ್ತಾದರೂ ರಷ್ಯಾವು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್‌ಸ್ಕಿ ಹೊರಗಿಟ್ಟರಷ್ಟೇ ಸಭೆಗೆ ಸಿದ್ಧ ಎಂದು ಸಂದೇಶ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗಿದೆ.
ಅಮೆರಿಕ ಜತೆ ಸಂಬಂಧ ಸಹಜ: ಭಾರತ ವಿಶ್ವಾಸ
ಪಿಟಿಐ ನವದೆಹಲಿಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ ಅಮೆರಿಕ ಜತೆಗಿನ ಸಂಬಂಧ ಮುಂದುವರಿಯುತ್ತದೆ ಎಂದು ಭಾರತ ಗುರುವಾರ ಆಶಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಅದರ ನಡುವೆ ಭಾರತದ ಈ ಹೇಳಿಕೆ ಬಂದಿದೆ.
ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ನಮ್ಮ ಪಾಲುದಾರಿಕೆಯು ಹಲವಾರು ಪರಿವರ್ತನೆಗಳು ಮತ್ತು ಸವಾಲುಗಳನ್ನು ಎದುರಿಸಿವೆ. ಆದರೂ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ ಸಂಬಂಧವು ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ. ಆಗಸ್ಟ್ ಮಧ್ಯದಲ್ಲಿ ಅಮೆರಿಕದ ರಕ್ಷಣಾ ನೀತಿ ತಂಡವು ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. 21ನೇ ಆವೃತ್ತಿಯ ಜಂಟಿ ಮಿಲಿಟರಿ ಸಮರಾಭ್ಯಾಸ ಈ ತಿಂಗಳ ಕೊನೆಯಲ್ಲಿ ಅಲಾಸ್ಕಾದಲ್ಲಿ ನಡೆಯುವ ನಿರೀಕ್ಷೆಯಿದೆ’ ಎಂದರು.
ಟ್ರಂಪ್-ಪುಟಿನ್ ಸಭೆ ವಿಫಲವಾದರೆ ಭಾರತದ ಮೇಲೆ ಮತ್ತಷ್ಟು ತೆರಿಗೆ: ಅಮೆರಿಕ
ನವದೆಹಲಿ: ಭಾರತದ ಮೇಲೆ ಅಮೆರಿಕದ ತೆರಿಗೆ ಬೆದರಿಕೆ ಮುಂದುವರಿದಿದ್ದು, ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ನಡೆಯಲಿರುವ ಸಂಧಾನ ಮಾತುಕತೆ ವಿಫಲವಾದರೆ, ಭಾರತದ ಮೇಲೆ ಮತ್ತಷ್ಟು ತೆರಿಗೆ ವಿಧಿಸಲಾಗುವುದು ಎಂದು ಅಮೆರಿಕ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.‘ರಷ್ಯಾದ ತೈಲವನ್ನು ಖರೀದಿಸುವುದಕ್ಕಾಗಿ ನಾವು ಭಾರತದ ಮೇಲೆ ದ್ವಿತೀಯ ಸುಂಕವನ್ನು ವಿಧಿಸಿದ್ದೇವೆ. ಒಂದು ವೇಳೆ ವಿಷಯಗಳು ಸರಿಯಾಗಿ ನಡೆಯದಿದ್ದರೆ, ನಿರ್ಬಂಧಗಳು ಅಥವಾ ಸುಂಕಗಳು ಹೆಚ್ಚಾಗಬಹುದು’ ಎಂದಿದ್ದಾರೆ.ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಪ್ರಯತ್ನದಲ್ಲಿರುವ ಟ್ರಂಪ್, ಪುಟಿನ್ ಜೊತೆ ಶುಕ್ರವಾರ ಮಾತುಕತೆ ನಡೆಸಲಿದ್ದಾರೆ. ಇದು ಫಲಪ್ರದವಾಗದಿದ್ದರೆ ಭಾರತಕ್ಕೆ ಮತ್ತಷ್ಟು ತೆರಿಗೆ ಬೀಳಲಿದೆ.