ರಷ್ಯಾ ಅಣುಸ್ಥಾವರದ ಮೇಲೆ ಉಕ್ರೇನ್‌ ದಾಳಿ

| N/A | Published : Aug 25 2025, 01:00 AM IST

ಸಾರಾಂಶ

ಉಕ್ರೇನ್‌-ರಷ್ಯಾ ಯುದ್ಧ ಭಾನುವಾರ ಮತ್ತಷ್ಟು ತೀವ್ರಗೊಂಡಿದೆ. ರಷ್ಯಾದ ಪಶ್ಚಿಮ ಕುರ್ಸ್ಕ್ ಪ್ರದೇಶದಲ್ಲಿರುವ ಅಣು ವಿದ್ಯುತ್‌ ಸ್ಥಾವರವನ್ನು ಗುರಿಯಾಗಿಸಿ ಉಕ್ರೇನ್‌ ಭಾನುವಾರ ಡ್ರೋನ್‌ ದಾಳಿ ನಡೆಸಿದೆ.

ಮಾಸ್ಕೋ: ಉಕ್ರೇನ್‌-ರಷ್ಯಾ ಯುದ್ಧ ಭಾನುವಾರ ಮತ್ತಷ್ಟು ತೀವ್ರಗೊಂಡಿದೆ. ರಷ್ಯಾದ ಪಶ್ಚಿಮ ಕುರ್ಸ್ಕ್ ಪ್ರದೇಶದಲ್ಲಿರುವ ಅಣು ವಿದ್ಯುತ್‌ ಸ್ಥಾವರವನ್ನು ಗುರಿಯಾಗಿಸಿ ಉಕ್ರೇನ್‌ ಭಾನುವಾರ ಡ್ರೋನ್‌ ದಾಳಿ ನಡೆಸಿದೆ. ಆದರೆ ಯಾವುದೇ ದೊಡ್ಡ ಹಾನಿಯಾಗದಂತೆ ತಾನು ಕ್ರಮ ಕೈಗೊಂಡಿದ್ದಾಗಿ ರಷ್ಯಾ ಹೇಳಿದೆ.

ಸೋವಿಯತ್‌ ರಷ್ಯಾದಿಂದ ಉಕ್ರೇನ್‌ ಪ್ರತ್ಯೇಕವಾಗಿ ಭಾನುವಾರ 34ನೇ ಸ್ವಾತಂತ್ರ್ಯ ದಿನ ಆಚರಿಸಿತು. ಆ ದಿನವೇ ಈ ದಾಳಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ರಕ್ಷಣಾ ಸಚಿವಾಲಯ, ‘ಉಕ್ರೇನ್‌, ನಮ್ಮ ಅಣು ವಿದ್ಯುತ್‌ ಸ್ಥಾವರ ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿತು. ಅದು ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದು ಹಾನಿಯಾಗಿದೆ. ಕೂಡಲೇ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದೇವೆ. ವಿಕಿರಣ ಸೋರಿಕೆ ಆಗಿಲ್ಲ. ಅದು ನಿಗದಿತ ಮಟ್ಟದಲ್ಲೇ ಇದೆ’ ಎಂದು ಸ್ಪಷ್ಟಪಡಿಸಿದೆ.

ಇನ್ನು ವಿಶ್ವಸಂಸ್ಥೆಯ ಪರಮಾಣು ಮೇಲ್ವಿಚಾರಕರು, ‘ಘಟನೆ ಬಗ್ಗೆ ನಮಗೆ ಅರಿವಿದೆ. ಆದರೆ ಏನಾಗಿದೆ ಎಂಬ ಬಗ್ಗೆ ಸ್ವತಂತ್ರ ಮಾಹಿತಿ ಇಲ್ಲ. ಅಣುಸ್ಥಾವರಗಳು ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಬಯಕೆ’ ಎಂದಿದೆ.

95 ಡ್ರೋನ್ ದಾಳಿ:

ಇದೇ ವೇಳೆ ರಷ್ಯಾ ರಕ್ಷಣಾ ಸಚಿವಾಲಯವು, ‘ಉಕ್ರೇನ್‌ ನಮ್ಮತ್ತ ಹಾರಿಬಿಟ್ಟ ಸುಮಾರು 95 ಡ್ರೋನ್‌ಗಳ ದಾಳಿಯನ್ನು ನಮ್ಮ ವಾಯುರಕ್ಷಣಾ ವ್ಯವಸ್ಥೆ ತಡೆದಿದೆ’ ಎಂದು ಹೇಳಿದೆ. ದಾಳಿ ನಡೆದ ಪ್ರದೇಶದ ಗವರ್ನರ್‌ ಮಾತನಾಡಿ, ‘10 ಡ್ರೋನ್‌ಗಳನ್ನು ಹೊಡೆದುಹಾಕಿದ್ದೇವೆ. ಅವುಗಳ ಅವಶೇಷಗಳು ಬೆಂಕಿಯನ್ನು ಹೆಚ್ಚಿಸುತ್ತಿವೆ’ ಎಂದಿದ್ದಾರೆ.

ಅತ್ತ ಉಕ್ರೇನ್‌ ಕೂಡ, ‘ರಷ್ಯಾ 72 ಡ್ರೋನ್‌ ಮತ್ತು ಡಿಕಾಯ್‌(ಶತ್ರುಸೇನೆಯ ದಾರಿ ತಪ್ಪಿಸಲು ಬಳಸುವ ಟ್ಯಾಂಕರ್‌ ಮಾದರಿ)ಗಳನ್ನು ಬಳಸಿ ದಾಳಿ ಮಾಡಿತ್ತು. ಆದರೆ ನಾವು 48 ಡ್ರೋನ್‌ ಹೊಡೆದುಹಾಕಿದೆವು ಅಥವಾ ಜಾಮ್‌ ಮಾಡಿದೆವು’ ಎಂದು ಹೇಳಿದೆ.

Read more Articles on