ಸಾರಾಂಶ
ಅಲಾಸ್ಕಾ : ಭಾರತ-ಪಾಕ್ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ಮಾತುಕತೆ ಮುಗಿದ ಬಳಿಕ ಫಾಕ್ಸ್ ನ್ಯೂಸ್ ಟೀವಿಗೆ ಸಂದರ್ಶನ ನೀಡಿದ ಟ್ರಂಪ್, ‘ನಾನು ಈವರೆಗೆ ಐದು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತುಂಬಾ ಕಠಿಣವಾಗಿತ್ತು’ ಎಂದರು.
‘ಭಾರತ ಮತ್ತು ಪಾಕ್ ಎರಡೂ ದೇಶಗಳು ಪರಸ್ಪರರ ಯುದ್ಧ ವಿಮಾನಗಳನ್ನು ಹೊಡೆದುರುಳಿಸುತ್ತಿದ್ದವು. ಅವರು ಅಣುಸಮರಕ್ಕೂ ಮುಂದಾಗಿದ್ದರು. ಒಂದು ವೇಳೆ ನೀವು ಯುದ್ಧ ಮುಂದುವರಿಸಿದರೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದೆ’ ಎಂರು.
ಇದೇ ವೇಳೆ, ಯುದ್ಧವನ್ನು ಕೆಟ್ಟದ್ದು ಎಂದು ಕರೆದ ಅವರು, ಸಂಘರ್ಷ ನಿಲ್ಲಿಸಿ ಜನರನ್ನು ಒಂದುಗೂಡಿಸುವ ಸಾಮರ್ಥ್ಯ ನನಗಿದೆ. ಅದಕ್ಕಾಗಿ ನಾನು ಅಮೆರಿಕದ ಶಕ್ತಿ ಬಳಸುತ್ತಿದ್ದೇನೆ’ ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವರಾದ ಜೈಶಂಕರ್ ಅವರು ಸಂಸತ್ತಿನಲ್ಲೇ ಕದನ ವಿರಾಮದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಲ್ಲ ಎಂದು ಸ್ಪಷ್ಟನೆ ನೀಡಿದ ಹೊರತಾಗಿಯೂ ಟ್ರಂಪ್ ಮಾತ್ರ ತಮ್ಮ ಮಧ್ಯಸ್ಥಿಕೆಯ ವಾದವನ್ನು ಪುನರುಚ್ಚರಿಸುತ್ತಲೇ ಬಂದಿದ್ದಾರೆ.