ಸೆಪ್ಟೆಂಬರ್‌ನಲ್ಲಿ ಮೋದಿ ಅಮೆರಿಕ ಪ್ರವಾಸ : ಟ್ರಂಪ್‌ ಭೇಟಿ ಸಾಧ್ಯತೆ

| N/A | Published : Aug 14 2025, 06:16 AM IST

Modi Trump

ಸಾರಾಂಶ

ಭಾರತ ಮತ್ತು ಅಮೆರಿಕ ನಡುವೆ ತೆರಿಗೆ ಸಂಘರ್ಷ ಭುಗಿಲೆದ್ದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ವಿಶ್ವಸಂಸ್ಥೆ: ಭಾರತ ಮತ್ತು ಅಮೆರಿಕ ನಡುವೆ ತೆರಿಗೆ ಸಂಘರ್ಷ ಭುಗಿಲೆದ್ದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನೂ ಭೇಟಿಯಾಗಿ ತೆರಿಗೆ ಸೇರಿ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಎರಡು ದೇಶಗಳ ನಡುವಿನ ತೆರಿಗೆ ವಿವಾದಕ್ಕೆ ಸಂಬಂಧಿಸಿದ ಗೊಂದಲಕ್ಕೆ ಕೊಂಚ ಬ್ರೇಕ್‌ ಬೀಳುವ ನಿರೀಕ್ಷೆ ಇದೆ.

ಫೆಬ್ರವರಿಯಲ್ಲಿ ತೆರಳಿದ್ದ ಮೋದಿ:

ಮೋದಿ ಅವರು ಕಳೆದ ಫೆಬ್ರವರಿಯಲ್ಲಿ ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಸೇರಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಅಮೆರಿಕ ಜತೆಗೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಅಮೆರಿಕವು ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿ ಆಘಾತ ನೀಡಿದೆ. ಆ ಬಳಿಕ ಎರಡೂ ದೇಶಗಳ ನಡುವಿನ ಆತ್ಮೀಯ ಸಂಬಂಧ ಹಳಿತಪ್ಪಿದ್ದು, ಹೀಗಾಗಿ ಮೋದಿ ಅವರ ಸೆಪ್ಟೆಂಬರ್‌ನಲ್ಲಿನ ಅಮೆರಿಕ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ವಿಶ್ವಸಂಸ್ಥೆಯ ಈ ಸಭೆ ಸಂದರ್ಭದಲ್ಲಿ ಮೋದಿ ಟ್ರಂಪ್‌ ಅವರು ಮಾತ್ರವಲ್ಲದೆ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್‌ಸ್ಕಿ ಸೇರಿ ಹಲವು ಮುಖಂಡರನ್ನು ಭೇಟಿಯಾಗಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಸೆ.9ರಂದು ವಿಶ್ವಸಂಸ್ಥೆ ಸಭೆ ಆರಂಭ:

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 80ನೇ ಅಧಿವೇಶನ ಸೆ.9ರಂದು ಆರಂಭವಾಗಲಿದೆ. ಸೆ.23-29ರ ನಡುವೆ ಉನ್ನತಮಟ್ಟದ ಚರ್ಚೆ ನಡೆಯಲಿದೆ. ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ ಸೆ.23ರಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯನ್ನುದ್ದೇಶಿಸಿ ಮೊದಲ ಬಾರಿ ವಿಶ್ವಸಂಸ್ಥೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ವೇಳಾಪಟ್ಟಿಯಂತೆ ಪ್ರಧಾನಿ ಮೋದಿ ಅವರು ಸೆ.26ರಂದು ವಿಶ್ವಸಂಸ್ಥೆಯಲ್ಲಿ ಮಾತನಾಡಲಿದ್ದು, ಅದೇ ದಿನ ಇಸ್ರೇಲ್‌, ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಖ್ಯಸ್ಥರೂ ಭಾಷಣ ಮಾಡಲಿದ್ದಾರೆ.

ಅಕ್ಟೋಬರ್‌ನಲ್ಲಿ ಟ್ರಂಪ್‌ ಭೇಟಿಗೆ ವೇದಿಕೆ

ಮೋದಿ ಅವರ ಅಮೆರಿಕ ಭೇಟಿ ಇನ್ನೂ ನಿಗದಿಯಾಗಿಲ್ಲ. ಒಂದು ವೇಳೆ ಅವರೇನಾದರೂ ಅಮೆರಿಕಕ್ಕೆ ತೆರಳಿ ಟ್ರಂಪ್‌ ರನ್ನು ಭೇಟಿಯಾದರೆ ಅಕ್ಟೋಬರ್‌ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಕ್ವಾಡ್‌ ಶೃಂಗಕ್ಕೆ ಅನುಕೂಲವಾಗಲಿದೆ. ಕ್ವಾಡ್‌ ಶೃಂಗದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಟ್ರಂಪ್‌ ಅವರಿಗೆ ಆಗಬಹುದಾದ ಇರಿಸು ಮುರುಸು ತಪ್ಪಿದಂತಾಗಲಿದೆ.

ಮುಂದಿನ ವಾರ ಚೀನಾ ಸಚಿವ ಭಾರತಕ್ಕೆ, ಜೈಶಂಕರ್ ರಷ್ಯಾಗೆ

ನವದೆಹಲಿ: ಅಮೆರಿಕ ತೆರಿಗೆ ದಾಳಿಗೆ ಪ್ರತಿಯಾಗಿ ಭಾರತ- ರಷ್ಯಾ- ಚೀನಾ ಒಂದಾಗುತ್ತಿವೆ ಎಂಬ ವಿಶ್ಲೇಷಣೆಗಳ ನಡುವೆಯೇ ಮೂರೂ ದೇಶಗಳ ನಡುವಿನ ಸಚಿವರ ತರಾತುರಿಯಲ್ಲಿ ಹಲವು ಸಭೆಗಳನ್ನು ಹಮ್ಮಿಕೊಂಡಿದ್ದಾರೆ.

ಇದರ ಭಾಗವಾಗಿ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಆ.18ರಂದು ಭಾರತಕ್ಕೆ ಬರುತ್ತಿದ್ದಾರೆ. ಈ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಆ.20-21ರಂದು ರಷ್ಯಾಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಂಗ್ ಯಿ ಅವರು ಆ.18ರಂದು ಭಾರತದ ಗಡಿ ಸಮಸ್ಯೆಗೆ ಸಂಬಂಧಿಸಿದ ವಿಶೇಷ ಪ್ರತಿನಿಧಿ, ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಭೇಟಿಗೂ ಮುನ್ನ ನಡೆಯಲಿದೆ.ಮತ್ತೊಂದೆಡೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರು ರಷ್ಯಾಗೆ ತೆರಳಿ ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆವ್‌ ಲಾವ್ರೋ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಪುಟಿನ್‌ ಭೇಟಿ ಬಳಿಕವೂ ಯುದ್ಧ ನಿಲ್ಲದಿದ್ರೆ ಘೋರ ಪರಿಣಾಮ: ಟ್ರಂಪ್‌

ವಾಷಿಂಗ್ಟನ್‌: 3 ವರ್ಷಕ್ಕೂ ಅಧಿಕ ಕಾಲದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಸಂಘರ್ಷ ನಿಲ್ಲಿಸುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಆ.15ರಂದು ಅಲಾಸ್ಕಾದಲ್ಲಿ ಭೇಟಿಯಾಗಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ‘ಆ ಮಾತುಕತೆಯ ನಂತರವೂ ಸಮರವನ್ನು ನಿಲ್ಲಿಸದಿದ್ದರೆ ರಷ್ಯಾ ಘೋರ ಪರಿಣಾಮವನ್ನು ಎದುರಿಸಬೇಕಾದೀತು’ ಎಂದು ಎಚ್ಚರಿಸಿದ್ದಾರೆ.

‘ಪುಟಿನ್‌ ಅವರು ಯುದ್ಧಸ್ಥಗಿತಕ್ಕೆ ಒಪ್ಪದಿದ್ದರೆ ಖಂಡಿತವಾಗಿಯೂ ಅದರ ಪರಿಣಾಮವನ್ನು ಎದುರಿಸಲಿದ್ದಾರೆ’ ಎನ್ನುವ ಮೂಲಕ ಟ್ರಂಪ್‌, ರಷ್ಯಾ ಮೇಲೂ ತೆರಿಗೆ ಬರೆ ಎಳೆಯುವ ಪರೋಕ್ಷ ಸುಳಿವು ನೀಡಿದ್ದಾರೆ. ಜತೆಗೆ, ಈ ಮಾತುಕತೆ ಯಶಸ್ವಿಯಾದಲ್ಲಿ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್‌ಕಿ ಅವರೊಂದಿಗೆ ತ್ರಿಪಕ್ಷೀಯ ಮಾತುಕತೆಯೂ ನಡೆಯಬಹುದು ಎಂದಿದ್ದಾರೆ.

Read more Articles on