ತುಮಕೂರು ವಿವಿಗೆ ಯುನಿಸೆಫ್‌ ತಂಡ ಭೇಟಿ, ಬಿಸಿಯೂಟ ಯೋಜನೆ ಬಗ್ಗೆ ಶ್ಲಾಘನೆ

| Published : Sep 13 2025, 02:04 AM IST

ಸಾರಾಂಶ

ಪಾವಗಡ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಮಾತನಾಡಿ, ಯೂನಿಸೆಫ್ ತಂಡ ಭೇಟಿ ನೀಡಿರುವುದು ಗಮನಾರ್ಹ. ಇಲ್ಲಿನ ವಿದ್ಯಾರ್ಥಿಗಳಿಗೆ ಶುಚಿ, ರುಚಿಯ ಊಟ ಬಡಿಸುವ ಜೊತೆಗೆ ಸಂಸ್ಕಾರವನ್ನು ಕಲಿಸಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರು

ದೇಶದಲ್ಲಿ ಪ್ರಥಮ ಬಾರಿಗೆ ತುಮಕೂರು ವಿವಿಯಲ್ಲಿ ಅನುಷ್ಠಾನಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವೀಕ್ಷಿಸಲು ವಿಶ್ವಸಂಸ್ಥೆಯ ಅಂಗಸಂಸ್ಥೆ ಯೂನಿಸೆಫ್‌ನ ದಕ್ಷಿಣ ಭಾರತ ವಲಯದ ಪ್ರತಿನಿಧಿಗಳ ತಂಡ ಶುಕ್ರವಾರ ಭೇಟಿ ನೀಡಿ, ಈ ಯೋಜನೆ ದೇಶದ ಅನ್ಯ ವಿವಿಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸುರಕ್ಷತಾ ತಜ್ಞೆ ಸೋನಿಕುಟ್ಟಿ ಜಾರ್ಜ್ ಮಾತನಾಡಿ, ಶಾಲಾ ಮಟ್ಟದಲ್ಲಿ ಇಂತಹ ಯೋಜನೆಗಳನ್ನು ಗಮನಿಸಿದ್ದೇವೆ. ಆದರೆ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಇಂತಹ ಯೋಜನೆಗಳು ಇರಲಿಲ್ಲ. ಇದೊಂದು ದೇಶಕ್ಕೆ ಮಾದರಿಯಾಗುವ ಯೋಜನೆಯಾಗಿದೆ ಎಂದರು.

ಮಧ್ಯಾಹ್ನದ ಬಿಸಿಯೂಟ ಯೋಜನೆಯು ವಿಶ್ವಮಟ್ಟದಲ್ಲಿ ಗುರುತಿಸಲ್ಪಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಶಿಫಾರಸ್ಸು ಮಾಡಲಾಗುವುದು ಎಂದರು.

ಗ್ರಾಮೀಣ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಯೋಜನೆಗೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡಲಾಗುವುದು ಎಂದರು. ಆಹಾರ ತಜ್ಞರಾದ ಡಾ.ಖ್ಯಾತಿ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡಿದ್ದಾರೆ. ಈ ರೀತಿಯ ಯೋಜನೆಗಳು ಅನ್ಯ ಕಾಲೇಜುಗಳಿಗೆ ಮಾದರಿ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಈ ಯೋಜನೆಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿವೆ. ಪ್ರತಿದಿನ 2000ಕ್ಕೂ ಅಧಿಕ ಗ್ರಾಮೀಣ ವಿದ್ಯಾರ್ಥಿಗಳು ಊಟವನ್ನು ಮಾಡುತ್ತಾರೆ. ದಾನಿಗಳ ನೆರವಿನಿಂದ ಈ ಯೋಜನೆ ಸುಗಮವಾಗಿ ಯಾವ ಅಡ್ಡಿ, ಆತಂಕಗಳಿಲ್ಲದೆ ನಡೆಯುತ್ತಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯೂನಿಸೆಫ್‌ನ ತಂಡ ಈ ಯೋಜನೆಯನ್ನು ವೀಕ್ಷಿಸಲು ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಪಾವಗಡ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಮಾತನಾಡಿ, ಯೂನಿಸೆಫ್ ತಂಡ ಭೇಟಿ ನೀಡಿರುವುದು ಗಮನಾರ್ಹ. ಇಲ್ಲಿನ ವಿದ್ಯಾರ್ಥಿಗಳಿಗೆ ಶುಚಿ, ರುಚಿಯ ಊಟ ಬಡಿಸುವ ಜೊತೆಗೆ ಸಂಸ್ಕಾರವನ್ನು ಕಲಿಸಲಾಗುತ್ತಿದೆ ಎಂದರು.

ಕುಲಸಚಿವ ಪ್ರೊ.ಎಂ.ಕೊಟ್ರೇಶ್, ಅನ್ನಪೂರ್ಣೇಶ್ವರಿ ಆಹಾರ ಸಮಿತಿಯ ಪ್ರಮುಖ ಎಚ್. ಜಿ. ಚಂದ್ರಶೇಖರ್, ವಿವಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಜಿ.ಪರಶುರಾಮ, ಪ್ರೊ. ಬಿ.ಕರಿಯಣ್ಣ, ಡಾ.ಗುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.