ತಿಹಾರ್‌ ಜೈಲಿಗೆ ಕೇಜ್ರಿವಾಲ್‌ ವಾಪಸ್‌

| Published : Jun 03 2024, 12:31 AM IST / Updated: Jun 03 2024, 06:27 AM IST

kejriwal news 010.jpg

ಸಾರಾಂಶ

ದಿಲ್ಲಿ ಅಬಕಾರಿ ಹಗರಣದಲ್ಲಿ ಬಂಧಿತರಾದ ಬಳಿಕ ಲೋಕಸಭೆ ಚುನಾವಣೆ ಕಾರಣ ಜಾಮೀನು ಪಡೆದಿದ್ದ ಆಪ್‌ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ತಿಹಾರ್‌ ಜೈಲಿಗೆ ಮರಳಿದ್ದಾರೆ.

ನವದೆಹಲಿ: ದಿಲ್ಲಿ ಅಬಕಾರಿ ಹಗರಣದಲ್ಲಿ ಬಂಧಿತರಾದ ಬಳಿಕ ಲೋಕಸಭೆ ಚುನಾವಣೆ ಕಾರಣ ಜಾಮೀನು ಪಡೆದಿದ್ದ ಆಪ್‌ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ತಿಹಾರ್‌ ಜೈಲಿಗೆ ಮರಳಿದ್ದಾರೆ.

ಕೇಜ್ರಿವಾಲ್‌ಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್‌ 21 ದಿನಗಳ ಮಧ್ಯಂತರ ಜಾಮೀನು ನೀಡಿ, ಜೂ.2ರಂದು ಜೈಲಿಗೆ ಮರಳಬೇಕು ಎಂದು ತಾಕೀತು ಮಾಡಿತ್ತು. ಈ ನಡುವೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ವಿಸ್ತರಣೆ ಕೋರಿದ್ದ ಅರ್ಜಿಯ ತೀರ್ಪು ಜೂ.5ಕ್ಕೆ ಮುಂದೂಡಿಕೆ ಆದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಭಾನುವಾರ ಜೈಲಿಗೆ ಮರಳಿದ್ದಾರೆ.

ಜೈಲಿಗೆ ಮರಳುವ ಮುನ್ನ ಕೇಜ್ರಿವಾಲ್, ತಂದೆ-ತಾಯಿಯ ಆಶೀರ್ವಾದ ಪಡೆದರು. ಬಳಿಕ ಪತ್ನಿ ಸುನಿತಾ, ದೆಹಲಿ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೇರಿದಂತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಗೂಡಿ ರಾಜಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ನಂತರ ಕನ್ನಾಟ್‌ನಲ್ಲಿರುವ ಹನುಮಂತನ ದೇಗುಲಕ್ಕೂ ಭೇಟಿ ನೀಡಿದರು.

ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮತ್ತೆ ಜೈಲಿಗೆ: ಕೇಜ್ರಿ

ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗದಿದ್ದರೂ ನನ್ನನ್ನು ಜೈಲಿಗೆ ಹಾಕಿದ್ದಾರೆ. ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ನಾನು ಮತ್ತೆ ಜೈಲಿಗೆ ಹೋಗಬೇಕಿದೆ. ಹೀಗಾಗಿ ನಾವೆಲ್ಲರೂ ಸರ್ವಾಧಿಕಾರಿಗಳಿಂದ ದೇಶವನ್ನು ಉಳಿಸಬೇಕಿದೆ. ಬಿಜೆಪಿ ಗೆಲ್ಲುತ್ತೆ ಎಂಬ ಚುನಾವಣೋತ್ತರ ಸಮೀಕ್ಷೆ ಸಂಪೂರ್ಣ ಸುಳ್ಳು. ಜೂ.4ರಂದು ನಮಗೇ ಅಧಿಕಾರ ಸಿಗಲಿದೆ.

- ಅರವಿಂದ ಕೇಜ್ರಿವಾಲ್‌, ಆಪ್‌ ನಾಯಕ