ಸಾರಾಂಶ
ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಪ್ ಇದೀಗ ಕರ್ನಾಟಕದ ಗೃಹಲಕ್ಷ್ಮಿ ರೀತಿ ಮಹಿಳೆಯರಿಗೆ ಹೊಸ ಭರವಸೆ ನೀಡಿದೆ.
ನವದೆಹಲಿ: ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಪ್ ಇದೀಗ ಕರ್ನಾಟಕದ ಗೃಹಲಕ್ಷ್ಮಿ ರೀತಿ ಮಹಿಳೆಯರಿಗೆ ಹೊಸ ಭರವಸೆ ನೀಡಿದೆ. ‘ದೆಹಲಿಯ ಎಲ್ಲಾ ಮಹಿಳೆಯರಿಗೆ ತಕ್ಷಣದಿಂದಲೇ ಮಾಸಿಕ 1,000 ರು. ನೀಡಲಾಗುವುದು. ಚುನಾವಣೆಯಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು 2,1000ಕ್ಕೆ ಏರಿಸಲಾಗುವುದು’ ಎಂದು ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
‘ಮಹಿಳಾ ಸಮ್ಮಾನ್ ಯೋಜನೆಗೆ ದೆಹಲಿಯ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರಕಿದೆ. ಇದರಡಿ ಮಹಿಳೆಯರು ಇಂದಿನಿಂದಲೇ ನೋಂದಾಯಿಸಿಕೊಳ್ಳಲು ಪ್ರಾರಂಭಿಸಬಹುದು. ನೊಂದಣಿಯಾದ ಕೂಡಲೇ ಹಣವನ್ನು ನೇರವಾಗಿ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನು ಸಿಎಂ ಆತಿಶಿ ‘ಕೇಜ್ರಿವಾಲ್‌ರ ಗ್ಯಾರಂಟಿ’ ಎಂದು ಕರೆದಿದ್ದಾರೆ.
ಆಪ್ ಈ ಘೋಷಣೆಯ ಬೆನ್ನಲ್ಲೇ, ‘ಚುನಾವಣೆ ಸಮೀಪಿಸುತ್ತಿರುವುದರಿಂದ ಭರವಸೆಯೆಂಬ ಲಾಲಿಪಾಪ್ ತೋರಿಸಿ ಮತ ಸೆಳೆಯುವ ತಂತ್ರ’ ಎಂದು ಬಿಜೆಪಿ ಹಂಗಿಸಿದೆ.