ಸಾರಾಂಶ
ತಿರುವನಂತಪುರಂ:ಕೇರಳದಲ್ಲಿ ಇತ್ತೀಚೆಗೆ ಜನರ ಮೇಲೆ ಆನೆ ದಾಳಿ ಸೇರಿದಂತೆ ಮಾರಣಾಂತಿಕ ವನ್ಯಜೀವಿ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ‘ರಾಜ್ಯ-ನಿರ್ದಿಷ್ಟ ವಿಪತ್ತು’ ಎಂದು ಕೇರಳ ಸರ್ಕಾರ ಘೋಷಿಸಿದೆ.
ಈ ಕ್ರಮದಿಂದ ಇಂಥ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಜಿಲ್ಲೆಗಳಲ್ಲಿ ಸೇವೆಗೆ ಬಳಸಿಕೊಳ್ಳುವ ಅಧಿಕಾರವು ಆಯಾ ಜಿಲ್ಲಾಡಳಿತಗಳಿಗೆ ಲಭಿಸಲಿದೆ.
ಇತ್ತೀಚೆಗೆ ಕರ್ನಾಟಕದ ಅರಣ್ಯಗಳಿಂದ ನುಗ್ಗಿದ್ದ ಆನೆಗಳು ಕೇರಳ ಗಡಿ ದಾಟಿ ದಾಂಧಲೆ ನಡೆಸಿ ಕೆಲವರನ್ನು ಕೊಂದು ಹಾಕಿದ್ದವು.
ಹೀಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಬುಧವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾನವ-ಪ್ರಾಣಿ ಸಂಘರ್ಷವನ್ನು ತಗ್ಗಿಸುವಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಕ್ರಿಯವಾಗಿ ಭಾಗವಹಿಸುತ್ತದೆ.
ಈ ನಡುವೆ, ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಇತರ ಸಚಿವರು ಅಥವಾ ಅಧಿಕಾರಿಗಳನ್ನು ಒಳಗೊಂಡ 4 ಸಮಿತಿಗಳನ್ನು ಸ್ಥಾಪಿಸಿ ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
2023-24ರಲ್ಲಿ ಆನೆ ದಾಳಿಯೊಂದಕ್ಕೆ 17 ಜನರು ಬಲಿಯಾಗಿದ್ದಾರೆ. 2022-23ರಲ್ಲಿ ಈ ಪ್ರಮಾಣ 27, 2021-22ರಲ್ಲಿ 35 ಇತ್ತು.
ಇತರೆ ರಾಜ್ಯಗಳಲ್ಲಿ ಎಷ್ಟು ಸಾವು?
ಕಳೆದ 5 ವರ್ಷಗಳಲ್ಲಿ ಪ್ರಾಣಿ-ಮಾನವ ಸಂಘರ್ಷಕ್ಕೆ ಕರ್ನಾಟಕದಲ್ಲಿ 148, ಒಡಿಶಾದಲ್ಲಿ 499, ಅಸ್ಸಾಂನಲ್ಲಿ 385, ಪಶ್ಚಿಮ ಬಂಗಾಳದಲ್ಲಿ 358 ಜನರು ಸಾವನ್ನಪ್ಪಿದ್ದರು.