ಸಾರಾಂಶ
‘ಮಲಯಾಳಂ ಚಿತ್ರರಂಗದಲ್ಲಿ ನಡೆದಿದೆ ಎನ್ನಲಾದ ಸೆಕ್ಸ್ ಹಗರಣದ ಕುರಿತು ನ್ಯಾ.ಹೇಮಾ ಸಮಿತಿ ವರದಿ ನೀಡಿ 4 ವರ್ಷವಾದರೂ ಕ್ರಮಕೈಗೊಂಡಿರಲಿಲ್ಲ ಏಕೆ?’ ಎಂದು ಕೇರಳದ ಎಡರಂಗ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.
ತಿರುವನಂತಪುರ: ‘ಮಲಯಾಳಂ ಚಿತ್ರರಂಗದಲ್ಲಿ ನಡೆದಿದೆ ಎನ್ನಲಾದ ಸೆಕ್ಸ್ ಹಗರಣದ ಕುರಿತು ನ್ಯಾ.ಹೇಮಾ ಸಮಿತಿ ವರದಿ ನೀಡಿ 4 ವರ್ಷವಾದರೂ ಕ್ರಮಕೈಗೊಂಡಿರಲಿಲ್ಲ ಏಕೆ?’ ಎಂದು ಕೇರಳದ ಎಡರಂಗ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.
ಕೇರಳದ ಸಿನಿರಂಗದ ಸಾಕಷ್ಟು ಮಹಿಳೆಯರು ಈ ಘಟನೆಯಲ್ಲಿ ನೊಂದಿದ್ದಾರೆ. ಸಮಾಜದಲ್ಲಿ ಅವರು ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ನೀವು ಅವರ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರವನ್ನು ಪ್ರಶ್ನಿಸಿದ ನ್ಯಾ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾ.ಸಿ.ಎಸ್.ಸುಧಾ ಅವರನ್ನೊಳಗೊಂಡ ಪೀಠ, ಸಮಿತಿ ವರದಿ ಕಳವಳಕಾರಿಯಾಗಿದೆ. ಆದರೂ ನೀವು 4 ವರ್ಷದಿಂದ ಸುಮ್ಮನಿದ್ದು ಇದೀಗ ತನಿಖೆಗೆ ಆದೇಶಿಸಿದ್ದೀರಿ. ಇಷ್ಟು ದಿನ ಬಗ್ಗೆ ಮೌನ ವಹಿಸಿದ್ದು ಏಕೆ? ಎಂದು ಆಕ್ಷೇಪ ವ್ಯಕ್ತಪಡಿಸಿತು.
‘ಜೊತೆಗೆ ಪೂರ್ಣ ವರದಿಯನ್ನು ಕೂಡಲೇ, ಘಟನೆ ಕುರಿತು ತನಿಖೆಗೆ ರಚಿಸಲಾಗಿರುವ ಎಸ್‌ಐಟಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ಎಸ್‌ಐಟಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮಗಳ ಬಗ್ಗೆ ನಾವು ಮುಂದಿನ ವಿಚಾರಣೆ ವೇಳೆ ಪರಿಶೀಲಿಸಲಿದ್ದೇವೆ. ತನಿಖೆ ವೇಳೆ ಆತುರ ಮಾಡಬಾರದು. ಯಾವುದೇ ಕಾರಣಕ್ಕೂ ಸಂತ್ರಸ್ತರು ಮತ್ತು ಆರೋಪಿಗಳ ಹೆಸರು ಬಹಿರಂಗ ಮಾಡಬಾರದು’ ಎಂದು ಸೂಚಿಸಿತು.
‘ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಬೇಕಿದ್ದರೆ ಮಹಿಳೆಯರು ತಮ್ಮನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸಿಕೊಳ್ಳಲು ಸಿದ್ಧರಾಗಿರಬೇಕು. ಇಡೀ ಚಿತ್ರರಂಗವನ್ನು ಕೆಲವೊಂದು ಪ್ರಭಾವಿಗಳ ಕೂಟ ನಿಯಂತ್ರಿಸುತ್ತಿದೆ. ಚಿತ್ರರಂಗದಲ್ಲಿ ಯಾರು ಇರಬೇಕು? ಯಾರು ಇರಬಾರದು ಎನ್ನವುದನ್ನು ಅದೇ ಕೂಟ ನಿರ್ಧರಿಸುತ್ತದೆ’ ಎಂಬುದು ಸೇರಿದಂತೆ ಹಲವು ಆಘಾತಕಾರಿ ಅಂಶಗಳನ್ನು ಒಳಗೊಂಡ ವರದಿಯನ್ನು ನ್ಯಾ.ಹೇಮಾ ಸಮಿತಿ 2019ರಲ್ಲೇ ವರದಿ ಸಲ್ಲಿಸಿತ್ತು. ಆದರೆ 4 ವರ್ಷಗಳಿಂದ ಸಮ್ಮನಿದ್ದ ಸರ್ಕಾರ, ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ವರದಿ ಬಹಿರಂಗಪಡಿಸಿತ್ತು.