ಕೇರಳದ ವಯನಾಡಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತರಾಜ್ಯದ ಇಬ್ಬರಲ್ಲ, 10 ಜನರು ಬಲಿ!

| Published : Aug 01 2024, 12:18 AM IST / Updated: Aug 01 2024, 09:07 AM IST

ಸಾರಾಂಶ

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ರಾಜ್ಯದ ಇನ್ನೂ 8 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, ಮಂಡ್ಯ ಜಿಲ್ಲೆಯ ಐವರು, ಚಾಮರಾಜನಗರ ತಾಲೂಕಿನ ಇಬ್ಬರು ಹಾಗೂ ಕೊಡಗಿನ ಬಾಲಕ ಸೇರಿದ್ದಾರೆ.

 ಮಂಡ್ಯ/ಚಾಮರಾಜನಗರ/ಮಡಿಕೇರಿ :  ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ರಾಜ್ಯದ ಇನ್ನೂ 8 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, ಮಂಡ್ಯ ಜಿಲ್ಲೆಯ ಐವರು, ಚಾಮರಾಜನಗರ ತಾಲೂಕಿನ ಇಬ್ಬರು ಹಾಗೂ ಕೊಡಗಿನ ಬಾಲಕ ಸೇರಿದ್ದಾರೆ. ಇದರಿಂದಾಗಿ ದುರಂತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ. ಈ ಪೈಕಿ, 7 ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ಮೃತದೇಹಗಳಿಗಾಗಿ ಹುಡುಕಾಟ ಮುಂದುವರಿದಿದೆ. ಇದೇ ವೇಳೆ, ದುರಂತದಲ್ಲಿ ಮಂಡ್ಯ ಜಿಲ್ಲೆಯ 9 ಮಂದಿ ನಾಪತ್ತೆಯಾಗಿದ್ದಾರೆ.ಮಂಗಳವಾರ ಚಾಮರಾಜನಗರ ಜಿಲ್ಲೆಯ ಪುಟ್ಟಸಿದ್ದ ಶೆಟ್ಟಿ (62) ಮತ್ತು ರಾಣಿ ಮದರ್‌ (50) ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಬುಧವಾರ ಚಾಮರಾಜನಗರ ತಾಲೂಕಿನ‌ ಇರಸವಾಡಿ ಮೂಲದ‌ ರಾಜನ್ ಮತ್ತು ರಜಿನಿ ದಂಪತಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಆದರೆ, ಅವರ ಮೃತದೇಹ ಇನ್ನೂ ಪತ್ತೆಯಾಗಬೇಕಿದೆ.

ಇದೇ ವೇಳೆ, ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯ ಕತ್ತರಘಟ್ಟ ಗ್ರಾಮದ ಲೀಲಾವತಿ, ನಿಹಾಲ್ ಸಾವನ್ನಪ್ಪಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೆ, ಜಿಲ್ಲೆಯ ಸಾವಿತ್ರಿ, ಅಚ್ಚು, ಶ್ರೀಕುಟ್ಟಿ ಎಂಬುವರು ಮೃತಪಟ್ಟಿದ್ದು, ಇವರ ಶವಗಳೂ ಪತ್ತೆಯಾಗಿವೆ. ಆದರೆ, ಈ ಮೂವರು ಯಾವ ಗ್ರಾಮಕ್ಕೆ ಸೇರಿದವರು ಎನ್ನುವುದು ತಿಳಿದು ಬಂದಿಲ್ಲ. ಈಗಾಗಲೇ ಅವರ ಸಂಬಂಧಿಕರು ಸ್ಥಳಕ್ಕೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.ಅಲ್ಲದೆ, ಜಿಲ್ಲೆಯ ಗುರುಮಲ್ಲ, ಸಾವಿತ್ರಿ, ಸಬೀತಾ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜಿತು, ದಿವ್ಯಾ, ರತ್ನ ಸೇರಿ 9 ಮಂದಿ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಮಂಡ್ಯ ಜಿಲ್ಲೆಯವರಾದ ಮಹದೇವಮ್ಮ ಎಂಬುವರು ನಿರಾಶ್ರಿತ ಕೇಂದ್ರದಲ್ಲಿ ಇದ್ದಾರೆಂಬ ಮಾಹಿತಿ ಸಿಕ್ಕಿದೆ. ಮಹದೇವಮ್ಮ ಯಾವ ನಿರಾಶ್ರಿತ ಕೇಂದ್ರದಲ್ಲಿದ್ದಾರೆ ಎನ್ನುವುದು ತಿಳಿದಿಲ್ಲ. ಅವರನ್ನು ಹುಡುಕುತ್ತಾ ಇದ್ದೀವಿ ಎಂದವರು ತಿಳಿಸಿದ್ದಾರೆ.

ಇದೇ ವೇಳೆ, ವಯನಾಡಿನ ಮೇಪಾಡಿಯಲ್ಲಿ ಕೊಡಗಿನ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದ ಕೂಲಿ ಕಾರ್ಮಿಕರಾದ ರವಿ-ಕವಿತಾ ದಂಪತಿಯ ಪುತ್ರ ರೋಹಿತ್ (9)ಎಂಬ ಬಾಲಕ ಮೃತಪಟ್ಟಿದ್ದಾನೆ. ಈತ ಗುಹ್ಯ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 15 ದಿನಗಳ ಹಿಂದೆ ತಾಯಿ ಕವಿತಾ ಜೊತೆಗೆ ಮೈಪಾಡಿಗೆ ಹೋಗಿದ್ದ. ರೋಹಿತ್‌ನನ್ನು ತನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದ ಕವಿತಾ, ಬೇರೆಡೆ ಕೆಲಸಕ್ಕೆ ಹೋಗಿದ್ದರು. ಹೀಗಾಗಿ ತಾಯಿ ಕವಿತಾ ಬದುಕಿದ್ದು, ಮಗ ರೋಹಿತ್ ಮೃತಪಟ್ಟಿದ್ದಾನೆ.