ಕೇರಳದಲ್ಲಿ ಮತ್ತೆ ಮಂಕಿಪಾಕ್ಸ್‌ ಆತಂಕ : ದುಬೈನಿಂದ ಬಂದ 38 ವರ್ಷದ ವ್ಯಕ್ತಿಗೆ ಸೋಂಕು ದೃಢ

| Published : Sep 19 2024, 01:54 AM IST / Updated: Sep 19 2024, 04:56 AM IST

ಸಾರಾಂಶ

ದುಬೈನಿಂದ ಕೇರಳಕ್ಕೆ ಆಗಮಿಸಿದ್ದ 38 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್‌ ದೃಢಪಟ್ಟಿದ್ದು, ಸದ್ಯ ಆತನಿಗೆ ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 15 ದಿನಗಳಲ್ಲಿ ದಾಖಲಾದ ಇದು ಎರಡನೇ ಪ್ರಕರಣವಾಗಿದೆ.

ಮಲಪ್ಪುರಂ: ಮಂಕಿಪಾಕ್ಸ್‌ ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನಲೆ ಕೇರಳದ ಉತ್ತರ ಮಲಪ್ಪುರಂ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್‌ ಇರುವುದು ದೃಢವಾಗಿದೆ. ಈ ಕುರಿತು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದು ಕಳೆದ 15 ದಿನದಲ್ಲಿ ದಾಖಲಾದ 2ನೇ ಪ್ರಕರಣವಾಗಿದೆ.

ದುಬೈನಿಂದ ಕೇರಳಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಮಂಕಿಪಾಕ್ಸ್‌ ದೃಢವಾಗಿದೆ. ಈ ವ್ಯಕ್ತಿ ಸದ್ಯ ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ವಿದೇಶದಿಂದ ಹಿಂದಿರುಗಿದವರಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ನಮಗೆ ಮಾಹಿತಿ ನೀಡಿ ಮತ್ತು ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ’ ಎಂದಿದ್ದಾರೆ.

ಕೇರಳ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್‌ ಪತ್ತೆಯಾಗುವ ಮುನ್ನ ಇತ್ತೀಚೆಗಷ್ಟೇ ದೆಹಲಿಯಲ್ಲಿ ಹರ್ಯಾಣ ಮೂಲದ 26 ವರ್ಷದ ಯುವಕನಿಗೆ ಮಂಕಿಪಾಕ್ಸ್‌ ದೃಢವಾಗಿತ್ತು.