ಸಾರಾಂಶ
ತಿರುವನಂತಪುರ: ವೈದ್ಯಕೀಯ ತಪಾಸಣೆಗೆಂದು ಬಂದು ಕೇರಳ ರಾಜಧಾನಿ ತಿರುವನಂತಪುರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಲಿಫ್ಟ್‌ನಲ್ಲಿ ರೋಗಿಯೊಬ್ಬ 2 ದಿನ ಸಿಲುಕಿ ಪರದಾಡಿದ ಘಟನೆ ನಡೆದಿದೆ. ವಿಚಿತ್ರವೆಂದರೆ, ಆತ ಸಿಲುಕಿದ್ದು 2 ದಿನಗಳ ಕಾಲ ಯಾರಿಗೂ ಗೊತ್ತಿರಲಿಲ್ಲ. ಸೋಮವಾರ ಆತನನ್ನು ಸುರಕ್ಷಿತವಾಗಿ ಹೊರತರಲಾಗಿದೆ.
ಕೇರಳದ ಉಳ್ಳೂರಿನ ನಿವಾಸಿ ರವೀಂದ್ರ ನಾಯರ್ (59) ಶನಿವಾರ ಆರೋಗ್ಯ ತಪಾಸಣೆಗೆ ಬಂದಿದ್ದರು. ಮೊದಲನೆ ಮಹಡಿಗೆ ಹೋಗಬೇಕೆಂದು ಲಿಫ್ಟ್ ಹತ್ತಿದ್ದರು. ಆದರೆ ಅವರು ಪ್ರವೇಶಿಸಿದ ನಂತರ ಲಿಫ್ಟ್ ಕೆಳಗೆ ಬಂದು ಸ್ಥಗಿತವಾಗಿದ್ದು, ನಂತರ ತೆರೆದುಕೊಂಡಿಲ್ಲ. ಅವರು ಕೂಗಿಕೊಂಡರೂ ಹಾಗೂ ಸೈರನ್ ಒತ್ತಿದ್ದರೂ ಪ್ರಯೋಜನವಾಗಲಿಲ್ಲ. ಸಾಲದ್ದಕ್ಕೆ ಗಲಿಬಿಲಿಯಲ್ಲಿ ಕೆಳಕ್ಕೆ ಬಿದ್ದು ಮೊಬೈಲ್ ಕೂಡ ನಿಷ್ಕ್ರಿಯವಾಯಿತು.ಈ ನಡುವೆ, ನಾಯರ್ ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಕುಟುಂಬ ಭಾನುವಾರ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನೂ ದಾಖಲಿಸಿತು.
ಸೋಮವಾರ ಬೆಳಗ್ಗೆ ಲಿಫ್ಟ್ ಆಪರೇಟರ್ ಬಂದು ಸ್ಥಗಿತವಾಗಿದ್ದ ಲಿಫ್ಟ್ ತೆರೆದಾಗ ನಾಯರ್ ಅದರಲ್ಲಿ ಸಿಲುಕಿಕೊಂಡಿದ್ದು ಗೊತ್ತಾಗಿದೆ. ಆಗ ನಾಯರ್ ಅವರನ್ನು ಸುರಕ್ಷಿತವಾಗಿ ಹೊರತರಲಾಗಿದೆ.ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪ ಹೊರಿಸಿ ಇಬ್ಬರು ಲಿಫ್ಟ್ ಆಪರೇಟರ್‌ಗಳು ಸೇರಿ ಮೂವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಯಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ.
ಯಾರೂ ನೆರವಿಗೆ ಬರಲಿಲ್ಲ:ಲಿಫ್ಟ್‌ನಿಂದ ಹೊರಗೆ ಬಂದ ಬಳಿಕ ಮಾತನಾಡಿರುವ ನಾಯರ್, ಲಿಫ್ಟ್‌ನಲ್ಲಿ ಸಿಲುಕಿದ ಬಳಿಕ ಅಲ್ಲಿರುವ ತುರ್ತು ಸಂಖ್ಯೆಗಳಿಗೆಲ್ಲಾ ಕರೆ ಮಾಡಿದೆ. ಯಾರೂ ಉತ್ತರಿಸಲಿಲ್ಲ. ಅಲಾರಾಂ ಮಾಡಿದೆ. ಆಗಲೂ ಯಾರೂ ಬರಲಿಲ್ಲ. ನಾನು ಸಿಕ್ಕಿಬಿದ್ದ ದಿನ 2ನೇ ಶನಿವಾರವಾಗಿತ್ತು. ಭಾನುವಾರ ಬೇರೆ ರಜೆ ಇತ್ತು. ಹೀಗಾಗಿ ಕಾಯುತ್ತಾ ಕೂತುಬಿಟ್ಟೆ. ಸಮಯ ಎಷ್ಟಾಗಿದೆ ಎಂದೂ ಗೊತ್ತಾಗಲಿಲ್ಲ. ಸೋಮವಾರ ಬೆಳಗ್ಗೆ ಆಪರೇಟರ್ ಬಂದರು. ಅಲಾರಾಂ ಬಟನ್ ಒತ್ತಿದೆ. ಬಳಿಕ ಆಪರೇಟರ್ ಜತೆಗೂಡಿ ಬಾಗಿಲನ್ನು ತೆರೆದೆವು. ಜಿಗಿದು ಹೊರಬಂದೆ’ ಎಂದು ತಿಳಿಸಿದ್ದಾರೆ.