ಸಾರಾಂಶ
ವಿವಿಧ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ನಡೆಸಲಾಗಿದ್ದ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಇದರಲ್ಲಿ ಹಲವು ವಿದ್ಯಾರ್ಥಿಗಳು ನಾನಾ ಕಾರಣಕ್ಕೆ ದೇಶದ ಗಮನ ಸೆಳೆದಿದ್ದಾರೆ. ಅಂಥವರ ಕೆಲ ಕಥೆಗಳು ಇಲ್ಲಿವೆ
ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ವಿವಿಧ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ನಡೆಸಲಾಗಿದ್ದ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಇದರಲ್ಲಿ ಹಲವು ವಿದ್ಯಾರ್ಥಿಗಳು ನಾನಾ ಕಾರಣಕ್ಕೆ ದೇಶದ ಗಮನ ಸೆಳೆದಿದ್ದಾರೆ. ಅಂಥವರ ಕೆಲ ಕಥೆಗಳು ಇಲ್ಲಿವೆ
ಮೇಲಧಿಕಾರಿ ಸೇಡಿನ ಮಾತಿಗೆ ನೊಂದು ರಾಜೀನಾಮೆ ನೀಡಿದ್ದ ಉದಯ್
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಉದಯ್ ಕೃಷ್ಣ ರೆಡ್ಡಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದವರು. ಆದರೆ ಒಮ್ಮೆ ಅವರ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕ ದ್ವೇಷದ ಕಾರಣಕ್ಕೆ ನೂರಾರು ಪೊಲೀಸರ ಮುಂದೆ ಉದಯ್‌ರನ್ನು ಅವಮಾನಿಸಿದ್ದರಂತೆ. ಇದರಿಂದ ಬೇಸತ್ತು ಅಂದೇ ಹುದ್ದೆಗೆ ರಾಜೀನಾಮೆ ನೀಡಿದ್ದ ಉದಯ್ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಅವರ ಶ್ರಮ ಇದೀಗ ಫಲಕೊಟ್ಟಿದ್ದು, 780 ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಬೀಡಿ ಕಟ್ಟುವ ಮಹಿಳೆ ಪುತ್ರ ಸಾಯಿಕಿರಣ್ ಕುಟುಂಬ ಕಟ್ಟುವ ಉತ್ಸಾಹದ ಯುವಕಗೆ 27ನೇ ರ್‍ಯಾಂಕ್
ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯ ನಂದಾಲ ಸಾಯಿಕಿರಣ್ ಯಾವುದೇ ಕೋಚಿಂಗ್ ಇಲ್ಲದೇ 27ನೇ ರ್‍ಯಾಂಕ್ ಪಡೆದಿದ್ದಾರೆ. ಕೈ ಮಗ್ಗ ಕೆಲಸ ಮಾಡಿಕೊಂಡಿದ್ದ ತಂದೆ ಕಾಂತಾರಾವ್ 2016ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ ಬಳಿಕ ತಾಯಿ ತಾಯಿ ಲಕ್ಷ್ಮೀ ಬೀಡಿ ಕಟ್ಟುವ ಕೆಲಸ ಮಾಡಿ ಕುಟುಂಬ ನೋಡಿಕೊಂಡಿದ್ದರು. ತಾಯಿಯ ಈ ಕಷ್ಟ ನೋಡಲಾಗದೇ ಮತ್ತು ತಂಗಿಯ ಉನ್ನತ ಶಿಕ್ಷಣಕ್ಕೆ ನೆರವಾಗುವ ಸಲುವಾಗಿ ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದ ಸಾಯಿಕಿರಣ್ ಇದೀಗ 27ನೇ ರ್‍ಯಾಂಕ್ ಪಡೆದಿದ್ದಾರೆ.==
ಕೊಟ್ಟಿಗೆಯಲ್ಲಿ ವಾಸದ ರೈತನ ಮಗನ ಯುಪಿಎಸ್‌ಸಿ ಸಾಹಸ
ಉತ್ತರ ಪ್ರದೇಶದ ಬುಲಂದ್‌ಶಹರ್‌ನ ರೈತರ ಮಗ ಪವನ್ ಕುಮಾರ್‌ರದ್ದು ಅತ್ಯಂತ ಬಡ ಕುಟುಂಬ. ಅವರ ಕುಟುಂಬ ವಾಸ ಮಾಡುವುದು ಕೊಟ್ಟಿಗೆ ರೀತಿಯ ಜಾಗದಲ್ಲಿ. ಆದರೆ ವಿದ್ಯಾಭ್ಯಾಸಕ್ಕೆ ಇದು ಅಡ್ಡಿಯಾಗಿಲ್ಲ. ಮೂರನೇ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಪವನ್ ಇದೀಗ 239ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಅವರು ಇದಕ್ಕಾಗಿ ಯಾವುದೇ ತರಬೇತಿ ಪಡೆದಿಲ್ಲ.==
12 ಪ್ರಯತ್ನ, 7 ಮೇನ್ಸ್, 5 ಸಂದರ್ಶನ ಆದರೂ ಆಯ್ಕೆ ಇಲ್ಲ! ಕುನಾಲ್ ಎಂಬ ಹೋರಾಟಗಾರ ಜೀವನ ಸಂಘರ್ಷ
ಈ ಬಾರಿಯ ಬಹುತೇಕ ಯುಪಿಎಸ್ಸಿ ಸಾಧಕರ ನಡುವೆಯೇ ಓರ್ವ ಹೋರಾಟಗಾರನ ಕಥೆ ಕೂಡಾ ಎಲ್ಲರ ಗಮನ ಸೆಳೆದಿದೆ. ಕುನಾಲ್ ಆರ್. ವಿರೂಲ್ಕರ್ ಎಂಬ ನಾಗರಿಕ ಸೇವಾ ಹುದ್ದೆ ಆಕ್ಷಾಂಕ್ಷಿ ಟ್ವೀಟರ್‌ನಲ್ಲಿ ತಮ್ಮ ಯುಪಿಎಸ್ಸಿ ಹಾದಿಯ ಕುರಿತು ಬರೆದುಕೊಂಡಿದ್ದಾರೆ. ಅದರಲ್ಲಿ ‘12 ಬಾರಿ ಯುಪಿಎಸ್ಸಿ ಪರೀಕ್ಷೆ ಪ್ರಯತ್ನ, 7 ಬಾರಿ ಮುಖ್ಯ ಪರೀಕ್ಷೆ, 5 ಬಾರಿ ಸಂದರ್ಶನಕ್ಕೆಆಯ್ಕೆ ಆದರೂ ಆಯ್ಕೆ ಇಲ್ಲ. ಬಹುಷ ಜೀವನದ ಮತ್ತೊಂದು ಹೆಸರೇ ಸಂಘರ್ಷ’ ಎಂದು ಬರೆದುಕೊಂಡಿದ್ದಾರೆ. ಅವರ ಯುಪಿಎಸ್ಸಿ ಹೋರಾಟದ ಕುರಿತು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ
ಬೆಂಗಳೂರಿನಲ್ಲಿ 32 ಲಕ್ಷ ವೇತನದ ನೌಕರಿ ತೊರೆದಿದ್ದ ಸಾಧಕ ಬಿಹಾರ ಅಪೂರ್ವ ಆನಂದ್‌ಗೆ 163ನೇ ರ್‍ಯಾಂಕ್
ಬಿಹಾರ ರೈತರ ಕುಟುಂಬಕ್ಕೆ ಸೇರಿದ ಅಪೂರ್ವ ಆನಂದ್ ಈ ಬಾರಿ ಯುಪಿಎಸ್ಸಿಯಲ್ಲಿ 163ನೇ ರ್‍ಯಾಂಕ್ ಪಡೆದಿದ್ದಾರೆ. ಇದಕ್ಕೂ ಮುನ್ನ ಜೆಇಇ ಪರೀಕ್ಷೆ ಉತ್ತೀರ್ಣರಾಗಿ ಐಐಟಿ ಕಾನ್ಪುರದಲ್ಲಿ ಪದವಿ ಪಡೆದಿದ್ದ ಅಪೂರ್ವ ಬಳಿಕ ಬೆಂಗಳೂರಿನಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಕಂಪನಿಯಲ್ಲಿ ವಾರ್ಷಿಕ 32 ಲಕ್ಷ ರು.ವೇತನದ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಐಎಎಸ್ ಆಗುವ ಕನಸಿನ ಹಿನ್ನೆಲೆಯಲ್ಲಿ ಕೋವಿಡ್ ಲಾಕ್ಡೌನ್ ಸಮಯದಲ್ಲಿ ತೊರೆದು ತವರಿಗೆ ತೆರಳಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಅದೀಗ ಫಲಕೊಟ್ಟಿದ್ದು 163ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಅಪ್ಪ, ಅಪ್ಪನಿಗೆ ಗೊತ್ತಿಲ್ಲದೇ ಪರೀಕ್ಷೆ, ಸಂದರ್ಶನ!
ಕೇರಳದ ಸಿದ್ಧಾರ್ಥಗೆ 4ನೇ ರ್‍ಯಾಂಕ್
ಕೇರಳದ ಕೊಚ್ಚಿಯ ರಾಮ್‌ಕುಮಾರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಪಡೆದಿದ್ದಾರೆ. ಅಚ್ಚರಿ ಎಂದರೆ ಅವರು ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆದ, ಬಳಿಕ ಸಂದರ್ಶನಕ್ಕೆ ಹಾಜರಾದ ವಿಷಯ ಅವರ ಪೋಷಕರಿಗೇ ಗೊತ್ತಿರಲಿಲ್ಲ. ಮಂಗಳವಾರ ಟೀವಿಯಲ್ಲಿ ಸುದ್ದಿಪ್ರಕಟವಾದ ಬಳಿಕವಷ್ಟೇ ರಾಮ್‌ಕುಮಾರ್ ಪೋಷಕರಿಗೆ ಈ ವಿಷಯ ತಿಳಿದುಬಂದಿದೆ. ಕಳೆದ ವರ್ಷ ಕೂಡಾ ಯುಪಿಎಸ್ಸಿಯಲ್ಲಿ 121ನೇ ರ್‍ಯಾಂಕ್ ಪಡೆದಿದ್ದ ರಾಮ್, ಹಾಲಿ ಹೈದ್ರಾಬಾದ್‌ನಲ್ಲಿ ಐಪಿಎಸ್ ತರಬೇತಿ ಪಡೆಯುತ್ತಿದ್ದರು. ಇದರ ನಡುವೆಯೇ ಪರೀಕ್ಷೆ ಬರೆದು ಇದೀಗ ಐಎಎಸ್ ಶ್ರೇಣಿ ಪಡೆಯುವ ಅರ್ಹತೆ ಪಡೆದುಕೊಂಡಿದ್ದಾರೆ.
ಬಲಗೈ ತುಂಡಾದರೂ ಎಡಗೈಲಲ್ಲಿ ಪರೀಕ್ಷೆ ಬರೆದ ಪಾರ್ವತಿ ಅಪಘಾತಕ್ಕೆ ಕೈತುಂಡರಿಸಿದ ಬಳಿಕ ಎಡಗೈ ಬಳಸಿ 282ನೇ ರ್‍ಯಾಂಕ್
ಕೇರಳದ ಅಂಬಲಪುಳದ ಪಾರ್ವತಿ ಗೋಪಕುಮಾರ್ 12ನೇ ವಯಸ್ಸಿನಲ್ಲಿ ರಸ್ತೆ ಅಪಘಾತಕ್ಕೆ ತಮ್ಮ ಬಲಗೈ ಕಳೆದುಕೊಂಡಿದ್ದರು. ಯುಪಿಎಸ್ಸಿ ಪರೀಕ್ಷೆ ಬರೆಯಲೆಂದೇ ಕಳೆದ ವರ್ಷ ಎಡಗೈನಲ್ಲಿ ಬರೆಯುವುದನ್ನು ರೂಢಿಸಿಕೊಂಡ ಅವರೀಗ ಅಪರಿಮಿತ ಶ್ರಮವಹಿಸಿ ಯುಪಿಎಸ್‌ಸಿಯಲ್ಲಿ 282ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಸೆರೆಬ್ರಲ್ ಪಾಲ್ಸಿಗೆ ತುತ್ತಾದ ಸಾರಿಕಾ ಯಶಸ್ಸು
ಕೇರಳದ ಸಾಧಕಿಗೆ 922ನೇ ರ್‍ಯಾಂಕ್
ಕೇರಳದ ಕೊಚ್ಚಿಯ ಸಾರಿಕಾಗೆ ಚಿಕ್ಕ ವಯಸ್ಸಿನಲ್ಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಗೆ ತುತ್ತಾಗಿದ್ದರು. ಆದರೂ ಎದೆಗುಂದದೇ ಕಾನೂನು ಪದವಿ ಗಳಿಸಿದ್ದ ಅವರೀಗ ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ 922ನೇ ರ್‍ಯಾಂಕ್ ಪಡೆದು ಮಾದರಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಈ ರ್‍ಯಾಂಕ್‌ಗೆ ತೃಪ್ತಿಗೊಳ್ಳದ ಸಾರಿಕಾ, ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ರ್‍ಯಾಂಕ್ ಉತ್ತಮಪಡಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದಾರೆ.