ಸಾರಾಂಶ
ನವದೆಹಲಿ: ದೇವಸ್ಥಾನ ನಿರ್ಮಾಣವಾಗುತ್ತಿರುವ ಸ್ಥಳಗಳಲ್ಲಿ ಮತ್ತು ಬೀಚ್‌ಗಳಲ್ಲಿ ಫೋಟೋಶೂಟ್ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಸಮಯವಿದೆ. ಆದರೆ ಹಿಂಸಾಚಾರದಿಂದ ಬಳಲುತ್ತಿರುವ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಣಿಪುರದಿಂದ ಮುಂಬೈವರೆಗೆ ನಡೆಯಲಿರುವ ಕಾಂಗ್ರೆಸ್‌ನ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಲೋಗೋ (ಲಾಂಛನ)ವನ್ನು ಪಕ್ಷ ಶನಿವಾರ ಬಿಡುಗಡೆಗೊಳಿಸಿತು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ ‘ಪ್ರಧಾನಿ ಮೋದಿಗೆ ಸಮುದ್ರದಲ್ಲಿ ಈಜಾಡುತ್ತಿರುವ ಫೋಟೋಶೂಟ್‌ಗೆ ಸಮಯವಿದೆ. ಕೇರಳ ಸೇರಿದಂತೆ ದೇವಸ್ಥಾನ ನಿರ್ಮಾಣವಾಗುತ್ತಿರುವ ಎಲ್ಲ ಕಡೆ ಅವರ ಫೋಟೋಗಳನ್ನು ನೋಡಬಹುದು. ಆದರೆ ಮಣಿಪುರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ.ಅಲ್ಲಿ ಜನ ಸಾಯುತ್ತಿದ್ದಾರೆ. ಆ ಮಹಾಪುರುಷ ಅಲ್ಲಿಗೆ ಏಕೆ ಹೋಗಲ್ಲ? ಅದು ದೇಶದ ಭಾಗವಲ್ಲವೇ?’ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ‘ಬಿಜೆಪಿ ಸರ್ಕಾರವು ಪ್ರತಿಪಕ್ಷ ನಾಯಕರಿಗೆ ಬೆದರಿಕೆ ಹಾಕಲು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸರ್ಕಾರ ಅವಕಾಶ ನೀಡದ ಕಾರಣ ಕಾಂಗ್ರೆಸ್ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಕೈಗೊಂಡಿದೆ.
ಯಾತ್ರೆಯು ಜನರ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಮತ್ತು ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ತತ್ವಗಳನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದೆ’ ಎಂದರು. ಜನವರಿ 14 ರಂದು ಆರಂಭವಾಗಲಿರುವ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು 6,713 ಕಿ.ಮೀ ಬಸ್ ಮತ್ತು ಕಾಲ್ನಡಿಗೆ ಮೂಲಕ 66 ದಿನಗಳ ಕಾಲ ಕ್ರಮಿಸಲಿದ್ದಾರೆ.