ಕಾರ್ಯಕರ್ತರು ಇಚ್ಛಿಸಿದರೆ ಲೋಕಸಭೆಗೆ ಸ್ಪರ್ಧೆ: ಖರ್ಗೆ

| Published : Mar 13 2024, 02:00 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ತಾವು ಸ್ಪರ್ಧಿಸಲ್ಲ ಎಂಬ ವರದಿಗಳನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದಾರೆ. ಕಾರ್ಯಕರ್ತರು ಇಚ್ಛಿಸಿದಲ್ಲಿ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಪಿಟಿಐ ನವದೆಹಲಿ

ಲೋಕಸಭಾ ಚುನಾವಣೆಗೆ ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ತಾವು ಸ್ಪರ್ಧಿಸಲ್ಲ ಎಂಬ ವರದಿಗಳನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದಾರೆ. ಕಾರ್ಯಕರ್ತರು ಇಚ್ಛಿಸಿದಲ್ಲಿ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

‘ಸ್ಪರ್ಧೆಯಿಂದ ನೀವು ಸರಿಯುವುದಾಗಿ ಇಂಗಿತ ವ್ಯಕ್ತಪಡಿಸಿದ ಬಗ್ಗೆ ಬಗ್ಗೆ ವರದಿಗಳು ಪ್ರಕಟ ಆಗಿವೆಯಲ್ಲ’ ಎಂದು ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಖರ್ಗೆ, ‘ಪಕ್ಷದ ಯಾವುದೇ ಹಿರಿಯ ನಾಯಕರು ಕಣದಿಂದ ದೂರ ಉಳಿಯುತ್ತಿಲ್ಲ. ನಾನೂ ಸ್ಪರ್ಧೆಗೆ ಹಿಂದೇಟು ಹಾಕುತ್ತಿಲ್ಲ. ನನಗೆ 83 ವರ್ಷ ವಯಸ್ಸಾಗಿದೆ. ನೀವು 65ಕ್ಕೆ ನಿವೃತ್ತಿ ಆಗುತ್ತೀರಿ. ಆದರೆ ನನಗೆ 83. ಕಾರ್ಯಕರ್ತರು ನೀವೇ ಸ್ಪರ್ಧಿಸಿ ಎಂದರೆ ಸ್ಪರ್ಧಿಸಲೂಬಹುದು. ಅಲ್ಲದೆ ನನ್ನ ಕ್ಷೇತ್ರ ಕಲಬುರಗಿಯಲ್ಲಿ 10 ಜನ ಆಕಾಂಕ್ಷಿಗಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಮಲ್ಲಿಕಾರ್ಜುನ ಖರ್ಗೆ ಕಳೆದ ಬಾರಿ ತಮ್ಮ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವವಾಗಿದ್ದರು. ‘ಈ ಸಲ ಅವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಸ್ಪರ್ಧೆ ಬದಲು ದೇಶ ಸುತ್ತಿ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರ ಅಳಿಯ ರಾಧಾಕೃಷ್ಣ ಅವರಿಗೆ ಕಲಬುರಗಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಆಗಬಹುದು’ ಎಂದು ವರದಿಗಳು ಹೇಳಿದ್ದವು.