ಸಾರಾಂಶ
ನವದೆಹಲಿ: ಡಾ.ಬಿ. ಆರ್ ಅಂಬೇಡ್ಕರ್ ಅವರ ಬಗ್ಗೆ ಮಂಗಳವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಶಾ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.‘ಶಾ ಅವರ ಹೇಳಿಕೆಯು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ. ಅವರ ನಡವಳಿಕೆಗಳು ಹಕ್ಕುಬಾಧ್ಯತೆಯ ಉಲ್ಲಂಘನೆಯಾಗಿದೆ ಮತ್ತು ಸದನದ ಅವಹೇಳನಕ್ಕೆ ಸಮಾನವಾಗಿದೆ. ಅಮಿತ್ ಶಾ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಉಲ್ಲೇಖಿಸಿದ್ದಾರೆ.
‘ಅಂಬೇಡ್ಕರ್ ಜಪ ಇಂದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಜಪದ ಬದಲು ದೇವರ ಜಪ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತು’ ಎಂದು ಶಾ ಮಂಗಳವಾರ ವಿಪಕ್ಷಗಳನ್ನು ಛೇಡಿಸಿದ್ದರು.,
ಶಾ ವಿರುದ್ಧ ಖರ್ಗೆ ಹಕ್ಕುಚ್ಯುತಿ ನೋಟಿಸ್ ನೀಡಿರುವುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂಬೇಡ್ಕರ್ ಫೋಟೋ ಬದಲು ಸೊರೋಸ್ ಫೋಟೋ: ಕಾಂಗ್ರೆಸ್ ಆಕ್ರೋಶ
ನವದೆಹಲಿ: ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಚಿತ್ರಗಳನ್ನು ಬಳಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನಡೆಸಿದ ಪ್ರತಿಭಟನೆಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ಸಿಗರ ಕೈಯಲ್ಲಿನ ಅಂಬೇಡ್ಕರ್ ಚಿತ್ರಗಳನ್ನು ಕಾಂಗ್ರೆಸ್ ಜತೆ ನಂಟು ಹೊಂದಿದ್ದಾರೆ ಎನ್ನಲಾದ ಭಾರತ ವಿರೋಧಿ ಉದ್ಯಮಿ ಜಾರ್ಜ್ ಸೊರೋಸ್ ಚಿತ್ರ ಹಾಕಿ ಎಡಿಟ್ ಮಾಡಿದೆ ಹಾಗೂ ‘ವಿ ಲವ್ ಜಾರ್ಜ್ ಸೊರೋಸ್’ ಎಂದು ಬರೆದಿದೆ. ಇದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿರುಗೇಟು ನೀಡಿ , ‘ಶಾ ಬಳಿಕ ಅಂಬೇಡ್ಕರರಿಗೆ ಕಾಂಗ್ರೆಸ್ ಇನ್ನೊಂದು ಅವಮಾನ ಮಾಡಿದೆ’ ಎಂದಿದ್ದಾರೆ.